ವಾರಂಗಲ್ ನಗರದ ಕಲ್ಲು ಒಡೆಯುವ ಹುಡುಗಿ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿದ್ದು ಹೇಗೆ?
:: ರಾಜೇಂದ್ರ ಭಟ್ ಕೆ.
ರಾಜಮಾರ್ಗ ಅಂಕಣ: ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ.ʼ
(ನೆಪೋಲಿಯನ್ ಹಿಲ್)
ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆಯು ಇಂದು ನಿಮ್ಮ ಮುಂದೆ.
ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ತೆಲಂಗಾಣ ರಾಜ್ಯದ ವಾರಂಗಲನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಮತ್ತು ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೋಡಲಿಕ್ಕೂ ಬರಲಿಲ್ಲ! ಅದರಲ್ಲಿ ಒಬ್ಬರು ಜ್ಯೋತಿ! ಆಕೆ ತನ್ನ ಬಾಲ್ಯದ ಐದು ವರ್ಷಗಳನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು.
ಅಸಹಾಯಕ ಬದುಕು, ನೂರಾರು ಸವಾಲು!
ಹಿರಿಯ ಮಗಳಾದ ಜ್ಯೋತಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ಕೂಡ ನಡೆದು ಹೋಯಿತು. ಆಗ ಅವರಿಗೆ 16 ವರ್ಷ! ಹದಿನೆಂಟು ತುಂಬುವ ಹೊತ್ತಿಗೆ ಮಡಿಲಲ್ಲಿ ಎರಡು ಹೆಣ್ಣು ಮಕ್ಕಳು ಮಲಗಿದ್ದವು! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಜ್ಯೋತಿ ಅವರೇ ಹೊತ್ತರು.
ಕಠಿಣ ದುಡಿಮೆಯ ಜೊತೆಗೆ ಒಂದಷ್ಟು ಕನಸು!
ಬತ್ತದ ಗದ್ದೆಯಲ್ಲಿ ನೇಜಿಯನ್ನು ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸವನ್ನು ಕೂಡ ಅವರು ಮಾಡಿದರು. ತನ್ನ ಬದುಕು ಸ್ವಾವಲಂಬಿ ಆಗಬೇಕು ಎನ್ನುವ ತುಡಿತ ಅವರನ್ನು ಅಂತಹ ಕೆಲಸಕ್ಕೆ ದೂಡಿತು.
ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಜ್ಯೋತಿ ರೆಡ್ಡಿ ಅವರು ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅದರ ಜೊತೆಗೆ ಅಂಬೇಡ್ಕರ್ ಬಯಲು ವಿವಿಯ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಅವರು ಮುಗಿಸಿದರು. ಹಾಗೆಯೇ ಅವರ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು.
ಟೀಚರ್ ಆಗಿ ಉದ್ಯೋಗ ಆರಂಭ ಮಾಡಿದರು
ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಉದ್ಯೋಗವು ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ ಕೈ ಸೇರುತ್ತಿತ್ತು. ಪುಟ್ಟ ಬಾಡಿಗೆ ಮನೆ. ಅವರ ಕುಟುಂಬಕ್ಕೆ ಆ ಸಂಬಳವು ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಘಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆಗಳನ್ನು ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.
ಅಮೆರಿಕಾದಲ್ಲಿ ಉದ್ಯೋಗದ ಆಫರ್ ಬಂತು!
2000ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದೇ ಬಿಟ್ಟಿತು. ಅವರ ಸೋದರ ಮಾವ ಒಬ್ಬರು ಅಮೆರಿಕಾದಿಂದ ಊರಿಗೆ ಬಂದವರು ಜ್ಯೋತಿ ಅವರನ್ನು ಭೇಟಿ ಮಾಡಿದರು. ಅಮೆರಿಕಾದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.
ಒಂದು ಕಡೆ ತನ್ನ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ದೊಡ್ಡ ಕನಸು! ಇವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿದರು. ಅದರಲ್ಲಿ ತೀವ್ರವಾದ ರಿಸ್ಕ್ ಇತ್ತು. ಆದರೆ ರಿಸ್ಕ್ ಇಲ್ಲದೆ ಕನಸು ಪೂರ್ತಿ ಆಗುವುದು ಹೇಗೆ?
ವಾರಂಗಲ್ ಟು ಅಮೆರಿಕಾ ಹಾರಿದರು!
ಪ್ರೀತಿಸುವ ತನ್ನ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು! ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿದರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಟ್ಟ ಅನುಭವ ಅವರಿಗೆ ಆಯಿತು. ತಂದಿದ್ದ ಸ್ವಲ್ಪ ದುಡ್ಡು ಪೂರ್ತಿ ಖಾಲಿ ಆಗಿತ್ತು.
ಮಾಯಾ ನಗರಿಯಲ್ಲಿ ಒಂಟಿ ಹೆಣ್ಣಿನ ಹೋರಾಟ!
ಅವರು ಯಾವತ್ತೂ ಅಮೆರಿಕಾ ನೋಡಿದವರೇ ಅಲ್ಲ! ಅಲ್ಲಿ ಅವರಿಗೆ ಸಂಬಂಧಿಕರು ಅಥವಾ ಪರಿಚಯದವರು ಅಂತ ಯಾರೂ ಇರಲಿಲ್ಲ. ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಗಾಳಿಗೆ ತೂರಿ ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್… ಹೀಗೆ ಹಲವು ಕಡೆ ದುಡಿದರು. ಆ ಸಂದರ್ಭ ಸೂಕ್ಷ್ಮವಾಗಿ ಅಮೆರಿಕಾದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೇರಿಕನ್ ಡಾಲರ್ ಸಂಪಾದನೆ ಮಾಡಿದ್ದರು!
ಆರಂಭ ಆಗಿಯೇ ಬಿಟ್ಟಿತು ಕನಸಿನ ಕಂಪೆನಿ!
ಅದನ್ನು ಬಂಡವಾಳ ಮಾಡಿಕೊಂಡು ಅಮೆರಿಕಾದ ಫೀನಿಕ್ಸ್ ಎಂಬಲ್ಲಿ ಒಂದು ಸಣ್ಣದಾದ ಕಚೇರಿಯನ್ನು ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು( 2001). ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಅವರಿಗೆ ಈಗ ಸಹಾಯಕ್ಕೆ ಬಂದಿತು.
ಅಮೆರಿಕಾದಲ್ಲಿ ಹೊರಗಿಂದ ಬರುವವರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ವೀಸಾ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಸ್ವಾವಲಂಬಿಯಾದ ಹೆಣ್ಣು ಮಗಳು ಅಮೆರಿಕಾದಲ್ಲಿ ಮಾಡಿದ ಭಾರೀ ಹೋರಾಟವು ಕೊನೆಗೂ ಫಲ ನೀಡಿತು. ಒಂದರ ಹಿಂದೆ ಒಂದು ಅವರ ಕಂಪೆನಿಯ ಫ್ರಾಂಚೈಸಿಗಳು ಆರಂಭ ಆದವು. ಅವರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.
ಇಂದವರ ಕಂಪೆನಿ ಬಿಲಿಯನ್ ಡಾಲರ್ ಆದಾಯ ಹೊಂದಿದೆ!
ಈಗ ಅವರ ಬಿಲಿಯನ್ ಡಾಲರ್ ಕಂಪೆನಿಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ತನ್ನ ಇಬ್ಬರು ಮಕ್ಕಳನ್ನು ಕೂಡ ಅವರು ಅಮೆರಿಕಕ್ಕೆ ಕರೆಸಿ ಸಾಫ್ಟವೇರ್ ಇಂಜಿನಿಯರಿಂಗ್ ಓದಿಸಿ ಮದುವೆ ಮಾಡಿದ್ದಾರೆ. ಅವರಿಗೆ NRI OF THE YEAR ಪ್ರಶಸ್ತಿ ದೊರೆತಿದೆ!
ಕೆರೆಯ ನೀರನು ಕೆರೆಗೆ ಚೆಲ್ಲಿ…
ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.
“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆಯು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ