ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajastan Elections 2023) ಆಡಳಿತಾರೂಢ ಕಾಂಗ್ರೆಸ್‌ನ್ನು ಮಣಿಸಿ (Antiincumbency to Congress) ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. 199 ಕ್ಷೇತ್ರಗಳ ಪೈಕಿ ಬಿಜೆಪಿ 120ರಷ್ಟು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ಗೆ ದೊಡ್ಡ ಠಕ್ಕರ್ ಕೊಟ್ಟಿದೆ. ಚುನಾವಣೆಯ ಅಖಾಡಕ್ಕಿಳಿದ ಸಂದರ್ಭದಲ್ಲಿ ಬಿಜೆಪಿ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ರಾಜ್ಯ ಬಿಜೆಪಿಯ ಮುಂಚೂಣಿ ನಾಯಕಿ ವಸುಂಧರಾ ರಾಜೇ ಅವರು ಮುನಿಸಿಕೊಂಡಿದ್ದರು. ರಾಜ್ಯದ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರವಿರಲಿಲ್ಲ. ಇನ್ನೊಂದು ಕಡೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಯುವ ನಾಯಕ ಸಚಿನ್ ಪೈಲಟ್ ಅವರು ರಾಜ್ಯದಲ್ಲಿ ಪ್ರಬಲ ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮಿದ್ದರು. ಇಷ್ಟೆಲ್ಲದರ ನಡುವೆಯೇ ಬಿಜೆಪಿ ರಾಜಸ್ಥಾನದಲ್ಲಿ ಕಮಾಲ್ (BJP set to win Rajastan ಮಾಡಿದೆ. ಹಾಗಿದ್ದರೆ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿರುವ ಕಾರಣಗಳು ಏನು? ಇಲ್ಲಿದೆ ವಿವರ.
1. ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಬದಲಾವಣೆಯ ಸಂಪ್ರದಾಯ ಕಳೆದ ಮೂವತ್ತ ಮೂರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ಮುಂದುವರಿದಿದೆ.
2. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ. ಉತ್ತರ ಭಾರತದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಜೋರಾಗಿದೆ. ಗುಜರಾತ್ ಚುನಾವಣೆಯನ್ನು ಸ್ವತಃ ಮೋದಿ ಅವರೇ ಮುಂದೆ ನಿಂತು ನಿಭಾಯಿಸಿದ್ದರು. ಈಗ ರಾಜಸ್ಥಾನಕ್ಕೂ ಅದರ ಪ್ರಭಾವ ತಟ್ಟಿದೆ.
3. ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಅವರ ಟಿಕೆಟ್ ಹಂಚಿಕೆ ಪ್ಲ್ಯಾನಿಂಗ್
ಈ ಬಾರಿ ರಾಜಸ್ಥಾನದಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ್ದವರು ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ. ಟಿಕೆಟ್ ಹಂಚಿಕೆ ವೇಳೆ ಒಂದೊಂದು ಕ್ಷೇತ್ರಕ್ಕೆ 10ರಷ್ಟು ಆಕಾಂಕ್ಷಿಗಳಿದ್ದರು. ಅವರೆಲ್ಲರನ್ನೂ ಸಮಾಧಾನ ಮಾಡಿ ಟಿಕೆಟ್ ಹಂಚಿಕೆ ಮಾಡಲಾಗಿತ್ತು. ಆಕಾಂಕ್ಷಿಗಳು ಕೂಡಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವಂತೆ ಮನವೊಲಿಸಲಾಗಿತ್ತು. ಆ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲಾಗಿತ್ತು.
4. ಯಾರೇ ಅಭ್ಯರ್ಥಿಯಾದರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂಬ ಖಡಕ್ ಸೂಚನೆಯನ್ನು ನೀಡಲಾಗಿತ್ತು. ಅದನ್ನು ಪಾಲಿಸಲಾಗಿದೆ. ಒಂದು ಹಂತದಲ್ಲಿ ವಸುಂಧರಾ ರಾಜೇ ಅವರನ್ನು ಕಡೆಗಣಿಸಲಾಗಿದೆ ಎಂಬ ಸೂಚನೆ ಇತ್ತು. ಆದರೆ, ಕೊನೆಯ ಹಂತದಲ್ಲಿ ಅವರನ್ನು ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ.
5. ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಗೆ ಠಕ್ಕರ್ ನೀಡಲು ಬಿಜೆಪಿ ಕೂಡಾ ಐದು ಪ್ರತ್ಯಾಸ್ತ್ರಗಳನ್ನು ಬಳಕೆ ಮಾಡಿತ್ತು. ಅದರಲ್ಲೂ ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಭರವಸೆ ನೀಡಲಾಗಿತ್ತು. ಗ್ಯಾಸ್ ಬೆಲೆ ಇಳಿಕೆ ಭರವಸೆ ಕೂಡಾ ಕೆಲಸ ಮಾಡಿದೆ.
6. ಮಹಿಳೆಯರ ಸುರಕ್ಷತೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಸ್ಥಾಪನೆ ಮಾಡಿದ್ದು ಮಹಿಳೆಯರಲ್ಲಿ ಭರವಸೆ ಮೂಡಿಸಿತ್ತು. ಜತೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್ ಸ್ಥಾಪಿಸಿ 18 ವರ್ಷ ಆದಾಗ 2 ಲಕ್ಷ ರೂ. ದೊರೆಯುವಂತೆ ಮಾಡುವ ಯೋಜನೆ ಆರಂಭ ಫಲ ನೀಡಿದೆ.
7. ಹಲವು ಕೇಂದ್ರ ಸಚಿವರು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ ಮತ್ತು ಕೆಲವು ಉಸ್ತುವಾರಿ ವಹಿಸಿದ್ದಾರೆ. ಈ ಮೂಲಕ ಬದಲಿ ನಾಯಕತ್ವದ ಮುನ್ಸೂಚನೆ ದೊರೆತಿತ್ತು.
ಇದನ್ನೂ ಓದಿ: Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್ ಪೋಲ್, ಗೆಲುವಿನತ್ತ ಬಿಜೆಪಿ ದಾಪುಗಾಲು
8. ಕಾಂಗ್ರೆಸ್‌ಗೆ ಎದುರಾಗಿದ್ದ ಆಡಳಿತ ವಿರೋಧಿ ಅಲೆಯನ್ನು, ಕಾಂಗ್ರೆಸ್ ಪಕ್ಷದ ಒಳ ಜಗಳವನ್ನು ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದು ಬಿಜೆಪಿಗೆ ಲಾಭವಾಗಿದೆ.
9. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಗುಜ್ಜರ್ ಸಮುದಾಯ ಕಾಂಗ್ರೆಸ್ ನ್ನು ಬೆಂಬಲಿಸಿತ್ತು. ಈ ಬಾರಿ ಅವರನ್ನು ಬಿಜೆಪಿಗೆ ಮತ್ತೆ ಸೆಳೆಯಲು ಸಾಧ್ಯವಾಗಿರುವುದು ಪ್ಲಸ್ ಪಾಯಿಟ್.
10. 2018ರ ಚುನಾವಣೆಯಲ್ಲಿ ರಜಪೂತ ಸಮುದಾಯ ಬಿಜೆಪಿ ಮೇಲೆ ಸಿಟ್ಟುಗೊಂಡಿತ್ತು. ಆದರೆ, ಬಿಜೆಪಿ ಸಾವಧಾನದಿಂದ ಸಮಸ್ಯೆಯನ್ನು ಬಗೆಹರಿಸಿಕೊಂಡು ಅವರನ್ನು ಮನವೊಲಿಸಿಕೊಂಡಿದೆ.