ನವದೆಹಲಿ: ಭೀಕರ ಮಳೆಗೆ ದೆಹಲಿ (Delhi Floods) ತತ್ತರಿಸಿದ್ದು, ಶನಿವಾರ ರಾಜೇಂದ್ರ ನಗರದಲ್ಲಿರುವ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ (Rau’s IAS Coaching Institute)ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಸಿದಂತೆ ಇದುವರೆಗೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Rajendra Nagar Tragedy).
ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ಕಟ್ಟಡದ ಮಾಲೀಕ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಟ್ಟಡದ ಗೇಟ್ ಧ್ವಂಸ ಮಾಡಲು ಯತ್ನಿಸಿದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಭಾನುವಾರ ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕ ಮತ್ತು ಸಂಯೋಜಕರನ್ನು ಬಂಧಿಸಿದ್ದರು. ಉಳಿದವರನ್ನು ಇಂದು ವಶಕ್ಕೆ ಪಡೆಯಲಾಗಿದೆ. ʼʼಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಸುಮ್ಮನೆ ಬಿಡುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ” ಎಂದು ಡಿಸಿಪಿ ಎಂ. ಹರ್ಷವರ್ಧನ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
Delhi Horror: Unconfirmed report says that two girl students have died in the basement flooding of an IAS coaching institute in the Old Rajinder Nagar area. pic.twitter.com/k7JaxHPRqm
— The Raisina Hills (@theraisinahills) July 27, 2024
“ನೆಲಮಾಳಿಗೆಯಲ್ಲಿರುವ ಗ್ರಂಥಾಲಯವು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬಯೋಮೆಟ್ರಿಕ್ ಸಕ್ರಿಯಗೊಳಿಸಿದ್ದ ಕಾರಣ ವಿದ್ಯಾರ್ಥಿಗಳಿಗೆ ತಕ್ಷಣ ಹೊರ ಬರಲು ಸಾಧ್ಯವಾಗಲಿಲ್ಲ. ಅಲ್ಲದೆ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದ್ವಾರ ಇರುವುದು ಕೂಡ ದುರಂತಕ್ಕೆ ಕಾರಣವಾಗಿದೆ. ಹೀಗಾಗಿ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಸ್ಥೆಯ ಮಾಲೀಕರು ವಿಫಲರಾಗಿದ್ದಾರೆ” ಎಂದು ಮುನ್ಸಿಪಾಲ್ ಕಾರ್ಪೋರೇಷನ್ ಆಫ್ ದಿಲ್ಲಿ (MCD)ಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈಗಾಗಲೇ 13 ಅಕ್ರಮ ತರಬೇತಿ ಕೇಂದ್ರಗಳಿಗೆ ಬೀಗ ಹಾಕಲಾಗಿದೆ.
ಘಟನೆ ವಿವರ
ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿ ಭಾರಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಇಲ್ಲಿನ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ನೀರು ನುಗ್ಗಿ ಐಎಎಎಸ್ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಮೃತಪಟ್ಟಿದ್ದರು.
ಇದನ್ನೂ ಓದಿ: Rajendra Nagar Tragedy: ದೆಹಲಿ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ
ಬೇಸ್‌ಮೆಂಟ್‌ನಲ್ಲಿ ಸಂಸ್ಥೆಯ ಲೈಬ್ರರಿ ಇದ್ದು, ಇಲ್ಲಿ ಸುಮಾರು 150-180 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದೆ. ಲೈಬ್ರರಿಯಲ್ಲಿ ಕುಳಿತು ಓದುತ್ತಿರುವಾಗ ಚರಂಡಿ ಮೋರಿಯ ತಡೆಗೋಡೆ ಒಡೆದು ಮಳೆ ನೀರು ನುಗ್ಗಿದ ಹಿನ್ನಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಮುನ್ಸಿಪಾಲ್ ಕಾರ್ಪೋರೇಷನ್ ಆಫ್ ದಿಲ್ಲಿಯನ್ನು ನಿಯಂತ್ರಿಸುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ಮೇಲೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. “ಇದು ಸರ್ಕಾರ ಮತ್ತು ಪುರಸಭೆಯ ವೈಫಲ್ಯ. ಇದು ಈ ದೇಶದ ಅತ್ಯಂತ ಸಂವೇದನಾರಹಿತ ಸರ್ಕಾರ. ಇದು ವಿದ್ಯಾರ್ಥಿಗಳ ಸಾವಲ್ಲ, ಕೊಲೆ” ಎಂದು ಆರೋಪಿಸಿದೆ. ಜತೆಗೆ ವಿದ್ಯಾರ್ಥಿಗಳು ಆಹೋರಾತ್ರಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.