:: ಮಯೂರಲಕ್ಷ್ಮೀ
ಭಾರತವನ್ನು ಭ್ರಷ್ಟಾಚಾರಮುಕ್ತ, ಸ್ವಾವಲಂಬಿ, ಸಧೃಢ ಮತ್ತು ಸ್ವದೇಶೀ ದೇಶವನ್ನಾಗಿಸುವ ಕನಸು ಹೊತ್ತಿದ್ದವರು ಸ್ವದೇಶಿ ಚಿಂತಕ ರಾಜೀವ ದೀಕ್ಷಿತ್. ಅವರು ನವೆಂಬರ್ 30 (Rajiv Dixit Birthday) ಉತ್ತರ ಪ್ರದೇಶದ ಆಲಿಘಢ ಸಮೀಪದ ಗ್ರಾಮವೊಂದರ ರೈತರ ಕುಟುಂಬದಲ್ಲಿ ಜನಿಸಿದವರು. ಸ್ವಗ್ರಾಮದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಮುಂದೆ ಎಲೆಕ್ಟ್ರಾನಿಕ್ ಎಂಜಿನೀಯರಿಂಗ್ ಪದವಿಯೊಂದಿಗೆ ಸಂಶೋಧನೆಯಲ್ಲೂ ಉನ್ನತ ಶ್ರೇಣಿ ಪಡೆದರು. ಭಾರತದ ಪ್ರತಿಷ್ಠಿತ ಸಿ.ಎಸ್.ಐ.ಆರ್. ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವರಿಗೆ ಜಾಗತೀಕರಣದಿಂದ ಬದಲಾಗುತ್ತಿದ್ದ ಭಾರತ ಚಿಂತೆಗೀಡುಮಾಡಿತು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಗಳಿಸಿದ ಭಾರತ ಮುಂದೆ ಆರ್ಥಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿತು. ಭಾರತ ಅಭಿವೃದ್ಧಿ ಪಥದತ್ತ ಸಾಗುವ ಹಂತದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾವಲಂಬಿ ರಾಷ್ಟ್ರವಾಗುವ ಅವಶ್ಯಕತೆ ಇತ್ತು. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ನೀತಿಯನ್ನು ಭಾರತ ಒಪ್ಪಿಕೊಂಡ ನಂತರ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಅಟ್ಟಹಾಸದಿಂದ ಸ್ಥಳೀಯ ಕೈಗಾರಿಕಾ ಸಂಸ್ಥೆಗಳು, ಗುಡಿ ಕೈಗಾರಿಕೆಗಳು ಹಾಗೂ ಕೃಷಿ ಕ್ಷೇತ್ರದ ವಹಿವಾಟುಗಳು ಆರ್ಥಿಕವಾಗಿ ನಲುಗಿದವು. ಇದರೊಂದಿಗೆ ಜಾಹೀರಾತುಗಳ ಪ್ರಭಾವದಿಂದ ಯುವಜನರ ಜೀವನಶೈಲಿ ಬದಲಾಗತೊಡಗಿತು. ನಮ್ಮ ದೇಶದ ಪ್ರತಿಭೆಗಳು ವ್ಯಾಸಂಗ ಮತ್ತು ಉದ್ಯೋಗಗಳನ್ನು ಹುಡುಕುತ್ತಾ ವಿದೇಶಗಳತ್ತ ಮುಖ ಮಾಡಿದರು.
ಅಂತಹ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಥನಗಳನ್ನು ಪ್ರಸ್ತುತ ಪಡಿಸುತ್ತಾ ಸಂಸ್ಕೃತಿಯ ರಕ್ಷಣೆಯ ಹೊಂಗಿರಣವಾಗಿ ಮೂಡಿಬಂದವರು ರಾಜೀವ್ ದೀಕ್ಷಿತ್. ತಮ್ಮ ವೃತ್ತಿಯನ್ನು ಕೈಬಿಟ್ಟು, ಗುರುಗಳಾದ ಶ್ರೀ ಧರ್ಮಪಾಲ್ ಮತ್ತು ಶತಾಯುಷಿ ಶ್ರೀ ಸುಧಾಕರ ಚತುರ್ವೇದಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರದ ಪುರ್ನನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾರತ ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿಲ್ಲವೆಂಬ ಅಂಶವನ್ನು ಮನಗಂಡ ಅವರು ನೈಜ ಇತಿಹಾಸವನ್ನು ಅರಿತರು. ಹಲವಾರು ದೇಶಗಳಿಗೆ ಭೇಟಿಯಿತ್ತು ಅಭಿವೃದ್ಧಿಯ ಹಾದಿ ಹುಡುಕಿದರು.
ಇಂಗ್ಲೆಂಡಿನ ಬ್ರಿಟಿಷರ ಲೈಬ್ರರಿಯಲ್ಲಿದ್ದ ಭಾರತದ ಇತಿಹಾಸದ ದಾಖಲೆಗಳ ಅಧ್ಯಯನ ಮಾಡಿದರು. ಭಾರತದ ಅಭಿವೃದ್ಧಿಯ ಹಾದಿಗೆ ಕಲ್ಲಾಗಿದ್ದ ಎಲ್ಲಾ ಸಮಸ್ಯೆಗಳ ಜಾಡು ಹಿಡಿದರು. ವಿದೇಶೀ ಬ್ಯಾಂಕ್‍ಗಳಿಂದ ಪಡೆದ ಕೋಟಿ ಕೋಟಿ ರೂಪಾಯಿಗಳ ಸಾಲದ ಫಲವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿಯ ಅಪಮೌಲ್ಯವಾಯಿತು. 1950ರ ದಶಕದಲ್ಲಿ ಭಾರತಕ್ಕೆ ಬಂದದ್ದು ಕೆಲವೇ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು. ಮುಂದಿನ ದಶಕಗಳಲ್ಲಿ ಅವುಗಳ ಸಂಖ್ಯೆ ಬೃಹತ್ತಾಗಿ ಬೆಳೆದು ಅರ್ಥವ್ಯವಸ್ಥೆಯನ್ನು ಬುಡಮೇಲಾಗಿಸಿತೆಂದು ಅರಿತರು. ಸ್ವದೇಶೀ ಸಂಘಟನೆ “ಆಜಾದೀ ಬಚಾವೋ ಅಂದೋಲನ” ಸಂಸ್ಥೆಯ ಮುಖ್ಯ ಪ್ರಭಾರಿಗಳಾಗಿ ಜವಾಬ್ದಾರಿ ಹೊತ್ತರು.
ಸಾಲದ ಬಾಧೆಗೆ ತುತ್ತಾದ ರೈತರ ಆತ್ಮಹತ್ಯೆಗೆ ಪರಿಹಾರ, ವಿಶ್ವ ವ್ಯಾಪಾರ ಒಕ್ಕೂಟದ ನಿಲುವಿನ ವಿರುದ್ಧ, ಗ್ಯಾಟ್ ಒಪ್ಪಂದದ ವಿರುದ್ಧ, ವಿದೇಶೀ ಕಂಪನಿಗಳ ವಿರುದ್ಧ ವೈಚಾರಿಕ ಸಮರ ಸಾರಿದರು. ಬರಹ ಮತ್ತು ಪ್ರವಚನಗಳಿಂದ ಸ್ವದೇಶೀ ಚಿಂತನೆ ಮತ್ತು ಭಾರತೀಯತೆಯ ಜಾಗೃತಿ ಮೂಡಿಸಲಾರಂಭಿಸಿದರು. ರಾಸಾಯನಿಕಯುಕ್ತ ಕೀಟನಾಶಕ, ಎಂಡೋಸಲ್ಫಾನ್, ಫಾಸ್ಟ್ ಫುಡ್, ಪೆಪ್ಸಿ-ಕೋಕ್‍ಗಳ ಷಡ್ಯಂತ್ರವನ್ನು ಬಯಲಿಗೆಳೆದರು. ವಿದೇಶೀ ವ್ಯಾಮೋಹಕ್ಕೀಡಾಗತೊಡಗಿದ ಯುವಶಕ್ತಿಯನ್ನು ಜಾಗೃತಗೊಳಿಸಿದರು. ದೇಶದ ಉದ್ದಗಲಕ್ಕೂ ಸಂಚರಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಮ್ಮ ಉಪನ್ಯಾಸಗಳಿಂದ ಎಲ್ಲರನ್ನೂ ಎಚ್ಚರಿಸಿದರು.
ಗಾಂಧೀಜಿಯವರ ಖಾದೀ-ಗ್ರಾಮ ಸ್ವರಾಜ್ಯ ಚಿಂತನೆಗಳು ಎಂದಿಗೂ ಪ್ರಸ್ತುತವೆಂದರು. ಸಾವಯವ ಕೃಷಿ, ಮತ್ತು ಗೋಸಂಪತ್ತಿನ ರಕ್ಷಣೆಯೊಂದಿಗೆ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮ, ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆಯ ಸಂಶೋಧನೆ ಮಾಡಿದರು. ಫಾಸ್ಟ್ ಫುಡ್ ಮತ್ತು ರಾಸಾಯನಿಕಯುಕ್ತ ತಂಪು ಪಾನೀಯಗಳ ಕುರಿತು ಯುವಕರಿಗೆ ಎಚ್ಚರಿಕೆ ನೀಡಿದರು. ಪ್ರತಿಭಾ ಪಲಾಯನದ ಪರಿಣಾಮದ ಅರಿವು ಮೂಡಿಸಿದರು. ಬ್ರಿಟಿಷರ ಕಾಲದ ಕಾನೂನುಗಳು, ತೆರಿಗೆ ಪದ್ಧತಿಯ ಬದಲಾವಣೆಗಳ ಕುರಿತು ಮಾಹಿತಿ, ಸಂಪತ್‍ಶಕ್ತಿಗಳ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟರು.
ಗೋವುಗಳು ಪರಿವಾರದ ಸದಸ್ಯರಂತೆ, ಗೋರಕ್ಷಣೆ ನಮ್ಮ ಹೊಣೆಯೆಂದರು. ಅವ್ಯಾಹತವಾಗಿ ನಡೆಯುತ್ತಿದ್ದ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಆಗ್ರಹಿಸಿದರು. ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪು ಹಣ ವಾಪಸಾತಿಗಾಗಿ ಹಸ್ತಾಕ್ಷರ ಸಂಗ್ರಹ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಾದಿಯಲ್ಲಿ ಲೋಕ್‍ಪಾಲ್‍ನಂತಹ ವ್ಯವಸ್ಥೆ, ನಾಗರೀಕರ ಹಕ್ಕುಗಳ ಕುರಿತು “ರೈಟ್ ಟು ರಿಕಾಲ್”ನಂತಹ ಆಲೋಚನೆಗಳನ್ನಿಟ್ಟರು.
ಉಪನ್ಯಾಸಗಳಿಂದ ಯುವಜನತೆಯ ಮನಸ್ಸನ್ನು ಆಕರ್ಷಿಸಿದ್ದ ಸ್ವದೇಶೀ ಐಕಾನ್ ರಾಜೀವ್ ದೀಕ್ಷಿತರು ಯುವಕರಿಗೆ ತಮ್ಮ ದೇಶವನ್ನು ನಾಡು-ನುಡಿಯನ್ನು ಪ್ರೀತಿಸಲು ಕಲಿಸಿದರು. ಅಪರಿಮಿತ ಮೇಧಾಶಕ್ತಿ, ಸರಳತೆ, ವಿಷಯ ಮಂಡನೆಯ ಗಾಂಭೀರ್ಯ, ಪ್ರವಾಸಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯೊಂದಿಗೆ ಸರಳತೆ ಅವರ ಮೇರು ವ್ಯಕ್ತಿತ್ವದ ಕುರುಹುಗಳು. ಬಾಬಾ ರಾಮದೇವರ “ಭಾರತ್ ಸ್ವಾಭಿಮಾನ್ ಟ್ರಸ್ಟ್”ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡು ಸತತವಾಗಿ ಭಾರತದೆಲ್ಲೆಡೆ ಸಂಚರಿಸಿ ತಮ್ಮ ಜ್ಞಾನದ ದರ್ಶನ ನೀಡಿದರು.
ನವೆಂಬರ್ 30, 2010ರಂದು ಛತ್ತೀಸಗಢದ ಭಿಲಾಯ್ ಸಮೀಪದಲ್ಲಿ ಭಾರತ ಸ್ವಾಭಿಮಾನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ ವಿಧಿವಶರಾದರು. ಅವರ ಜನ್ಮದಿನ ನವೆಂಬರ್ 30ನ್ನು “ಸ್ವದೇಶೀ ದಿನ” (National Swadeshi Day, Swadeshi Din) ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!