ರಾಯ್‌ಪುರ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir)ದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಈ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಈ ಮಧ್ಯೆ ಛತ್ತೀಸ್‌ಗಢ (Chhattisgarh)ದ ಬಿಜೆಪಿ ಸರ್ಕಾರ ಅಯೋಧ್ಯೆ ರಾಮ ಮಂದಿರಕ್ಕೆ ತೆರಳುವ ಭಕ್ತರಿಗೆ ಉಚಿತ ರೈಲು ಟಿಕೆಟ್ ಒದಗಿಸುವ ಯೋಜನೆ(Free train travel scheme) ಜಾರಿಗೆ ಒಪ್ಪಿಗೆ ನೀಡಿದೆ.
ಏನಿದು ಯೋಜನೆ?
ಬುಧವಾರ (ಜನವರಿ 10) ಮುಖ್ಯಮಂತ್ರಿ ವಿಷ್ಣುದೇವ ಸಾಯಿ (Vishnu Deo Sai) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ʼʼ2023ರ ವಿಧಾನಸಭಾ ಚುನಾವಣೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ವಾಗ್ದಾನದಂತೆ ಈ ಯೋಜನೆ ಜಾರಿಗೆ ಬರಲಿದೆʼʼ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪ್ರತಿ ವರ್ಷ ಸುಮಾರು 20 ಸಾವಿರ ಭಕ್ತರನ್ನು ಅಯೋಧ್ಯೆಗೆ ರೈಲಿನ ಮೂಲಕ ಕರೆದೊಯ್ಯುವ ಯೋಜನೆ ಇದಾಗಿದೆ.
ಯಾರೆಲ್ಲ ಅರ್ಹರು?
18ರಿಂದ 75 ವರ್ಷದೊಳಗಿನ ಆರೋಗ್ಯವಂತ ನಾಗರಿಕರು ಈ ಯೋಜನೆಗೆ ಅರ್ಹರು. ಈ ಯೋಜನೆಯ ಮೊದಲ ಭಾಗವಾಗಿ 55 ವರ್ಷಕ್ಕಿಂತ ಮೇಲ್ಪಟ್ಟವರನ್ನು ಆಯ್ಕೆ ಮಾಡಲಾಗುವುದು. ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರೂಪಿಸಲಾಗುತ್ತದೆ. ಈ ಮೂಲಕ ಪ್ರತಿ ವರ್ಷ 20 ಸಾವಿರ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ʼʼಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿ (Chhattisgarh Tourism Board) ಮೂಲಕ ಅಯೋಧ್ಯೆ ರಾಮ ಮಂದಿರ ಯಾತ್ರೆ ಯೋಜನೆ ಜಾರಿಗೆ ಬರಲಿದೆ. ಇದಕ್ಕೆ ಅಗತ್ಯವಾದ ಅನುದಾನವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಒದಗಿಸಲಾಗುವುದುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಯೋಜನೆಯನ್ನು ಕಾರ್ಯಗತಗೊಳಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC)ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಮತ್ತು ಸಾಪ್ತಾಹಿಕ ವಿಶೇಷ ರೈಲು ವ್ಯವಸ್ಥೆ ಮಾಡಲಾಗುವುದುʼʼ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ಈ ವಿಶೇಷ ರೈಲು ರಾಯ್‌ಪುರ, ದುರ್ಗ್, ರಾಯ್‌ಗಢ ಮತ್ತು ಅಂಬಿಕಾಪುರ್ ಸ್ಟೇಷನ್‌ನಿಂದ ಸುಮಾರು 900 ಕಿ.ಮೀ. ದೂರದಲ್ಲಿರುವ ಅಯೋಧ್ಯೆಗೆ ತೆರಳಲಿದೆ. ಇನ್ನೊಂದು ವಿಶೇಷತೆ ಎಂದರೆ ಈ ಯಾತ್ರೆಯ ವೇಳೆ ಪ್ರವಾಸಿಗರು ವಾರಣಾಸಿಯಲ್ಲಿ ಒಂದು ರಾತ್ರಿ ತಂಗಬಹುದು. ಅವರನ್ನು ಕಾಶಿ ವಿಶ್ವನಾಥ ದೇಗುಲಕ್ಕೆ ಮತ್ತು ಗಂಗಾ ಆರತಿ ನಡೆಯುವ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Ram Mandir: ರಾಮ ಮಂದಿರ ದೇಗುಲಕ್ಕೆ ಹರಿದು ಬಂತು ದೇಣಿಗೆ; ಇದುವರೆಗೆ ಸಂಗ್ರಹವಾಗಿದ್ದು ಎಷ್ಟು?
ಡ್ರೈ ಡೇ
ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22ರಂದು ರಾಜ್ಯದಲ್ಲಿ ಡ್ರೈ ಡೇ ಆಚರಿಸಲಾಗುವುದು ಎಂದು ಛತ್ತೀಸ್‌ಗಢ ಸರ್ಕಾರ ಈಗಾಗಲೇ ಘೋಷಿಸಿದೆ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಛತ್ತೀಸ್‌ಗಢ ಹೈಕೋರ್ಟ್‌ನ ಹಿರಿಯ ವಕೀಲ ಪ್ರಫುಲ್ ಭರತ್ ಅವರನ್ನು ಹೊಸ ಅಡ್ವೊಕೇಟ್ ಜನರಲ್ (ಎಜಿ) ಆಗಿ ನೇಮಿಸಲು ನಿರ್ಧರಿಸಲಾಗಿದೆ. ಕಳೆದ ತಿಂಗಳು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜೀನಾಮೆ ನೀಡಿದ ಮಾಜಿ ಎಜಿ ಸತೀಶ್ ಚಂದ್ರ ವರ್ಮಾ ಅವರ ಸ್ಥಾನವನ್ನು ಪ್ರಫುಲ್ ಭರತ್ ತುಂಬಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ