ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ (Ram Mandri) ಪ್ರಾಣ ಪ್ರತಿಷ್ಠೆ ಅದ್ಧೂರಿಯಾಗಿ ನೆರವೇರಿದೆ. ಅದಾದ ಬಳಿಕ ಜನವರಿ 23ರಿಂದ ದೇವಸ್ಥಾನ ಭಕ್ತರ ಪ್ರವೇಶಕ್ಕಾಗಿ ಮುಕ್ತವಾಗಿದ್ದು, ರಾಮನ ದರ್ಶನಕ್ಕೆ ಅಯೋಧ್ಯೆಗೆ ಭಕ್ತ ಜನ ಪ್ರವಾಹವೇ ಹರಿದು ಬರುತ್ತಿದೆ. ಪ್ರತಿದಿನ ಲಕ್ಷಕ್ಕಿಂತ ಅಧಿಕ ಮಂದಿ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಅಯೋಧ್ಯೆಯಲ್ಲಿ ಜನಪ್ರಿಯ ಆಹಾರ ಸರಪಳಿಗಳಾದ ಡೊಮಿನೋಸ್ (Domino’s) ಮತ್ತು ಪಿಜ್ಜಾ ಹಟ್ (Pizza Hut) ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಮಾಂಸ ಖಾದ್ಯಗಳನ್ನು ಮಾರಾಟ ಮಾಡುವಂತಿಲ್ಲ. ಗ್ರಾಹಕರಿಗೆ ಕೇವಲ ಸಸ್ಯಾಹಾರ ಪೂರೈಸಬೇಕು. ಅದಾಗ್ಯೂ ವ್ಯವಹಾರದಲ್ಲಿ ವೃದ್ಧಿ ದಾಖಲಾಗಿದೆ.
ನಿಷೇಧಿತ ಪ್ರದೇಶ
ರಾಮಾಯಣಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳನ್ನು ಒಳಗೊಂಡಿರುವ ದೇವಾಲಯ ಪಟ್ಟಣದ ಸುತ್ತಲೂ 15 ಕಿ.ಮೀ. ಪ್ರದೇಶ, ಪಂಚ ಕೋಸಿ ಪರಿಕ್ರಮ ಮಾರ್ಗದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ವ್ಯಾಖ್ಯಾನಿತ ಪ್ರದೇಶದ ಹೊರಗೆಯಷ್ಟೇ ಕಾರ್ಯನಿರ್ವಹಿಸಲು ಮಾಂಸಾಹಾರಿ ಹೋಟೆಲ್‌ಗಳಿಗೆ ಅವಕಾಶ ನೀಡಲಾಗಿದೆ.
ಇತ್ತೀಚೆಗೆ ಉದ್ಘಾಟಿಸಲಾದ ರಾಮ ಮಂದಿರದಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ದಿನೇಶ್ ಯಾದವ್ ಅವರ ಡೊಮಿನೋಸ್ ಪಿಜ್ಜಾ ಶಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಈ ಮಳಿಗೆಯು ಪಾಶ್ಚಿಮಾತ್ಯ ಪಾಕಪದ್ಧತಿಯನ್ನು ಗ್ರಾಹಕರಿಗೆ ಉಣ ಬಡಿಸುತ್ತಿರುವುದು ಇದಕ್ಕೆ ಕಾರಣ. ರಾಮ ಮಂದಿರ ಸಮೀಪದ ಮೊದಲ ಡೊಮಿನೋಸ್ ಮಳಿಗೆಯಾದ ಇದು ದೇಶದ ವಿವಿಧ ಭಾಗಗಳಿಂದ ರಾಮನ ದರ್ಶನಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತಿದೆ.
ʼʼಇಲ್ಲಿ ಮಳಿಗೆ ತೆರೆದ ಮೊದಲ ದಿನವೇ ಸುಮಾರು 5,000 ರೂ.ಗಳ ವ್ಯವಹಾರ ನಡೆದಿತ್ತು. ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ. ಹೀಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲʼʼ ಎಂದು ದಿನೇಶ್ ತಿಳಿಸಿದ್ದಾರೆ. ರಾಮ ಮಂದಿರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಮಾಲ್ ಆಫ್ ಅವಧ್‌ನಲ್ಲಿ ಅವಧ್ ಕುಮಾರ್ ವರ್ಮಾ ಪಿಜ್ಜಾ ಹಟ್ ಮಳಿಗೆಯನ್ನು ನಿರ್ವಹಿಸುತ್ತಿದ್ದಾರೆ. ಇದು ಪಂಚ ಕೋಸಿ ಪರಿಕ್ರಮ ಮಾರ್ಗದ ಹೊರಗಿದ್ದರೂ ಸಸ್ಯಾಹಾರಿ ಆಹಾರವನ್ನು ಮಾತ್ರ ಒದಗಿಸುತ್ತಿದೆ. ಅವರು ದೇವಾಲಯದ ಬಳಿ ತಮ್ಮ ವ್ಯವಹಾರವನ್ನು ಆರಂಭಿಸುವ ಬಗ್ಗೆಯೂ ಯೋಜನೆ ಹಾಕಿಕೊಂಡಿದ್ದಾರೆ.
ಅಧಿಕಾರಿಗಳು ಹೇಳೋದೇನು?
ರೆಸ್ಟೋರೆಂಟ್‌ಗಳ ಬಗ್ಗೆ ಮಾತನಾಡಿದ ಅಯೋಧ್ಯೆಯ ಸರ್ಕಾರಿ ಅಧಿಕಾರಿ ವಿಶಾಲ್ ಸಿಂಗ್, “ಅಯೋಧ್ಯೆಯಲ್ಲಿ ತಮ್ಮ ಅಂಗಡಿಗಳನ್ನು ಆರಂಭಿಸಲು ದೊಡ್ಡ ಆಹಾರ ಸರಪಳಿ ಮಳಿಗೆಗಳು ಮನವಿ ಸಲ್ಲಿಸಿವೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ ಒಂದೇ ಒಂದು ಷರತ್ತು ವಿಧಿಸಲಾಗುತ್ತದೆ. ಪಂಚ ಕೋಸಿಯೊಳಗೆ ಮಾಂಸಾಹಾರಿ ಅಡುಗೆ ತಯಾರಿಸಬಾರದು. ಸಸ್ಯಾಹಾರಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದರೆ ಕೆಎಫ್‌ಸಿಗೆ ಸ್ಥಳಾವಕಾಶ ನೀಡಲು ನಾವು ಸಿದ್ಧʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ತೆರಳುವ ಯೋಚನೆಯಲ್ಲಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ಈತನ್ಮಧ್ಯೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಚೌಧರಿ ಚರಣ್ ಸಿಂಗ್ ಘಾಟ್‌ನಲ್ಲಿ ಫುಡ್ ಪ್ಲಾಜಾ ನಿರ್ಮಾಣವನ್ನು ಪ್ರಾರಂಭಿಸಿದೆ. ಇದು ಈ ತಿಂಗಳು ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ. ಫುಡ್ ಪ್ಲಾಜಾದಲ್ಲಿ ವಿವಿಧ ಆಹಾರ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ