Site icon Vistara News

Ram Mandir: ಏನಿದು ಪ್ರಾಣ ಪ್ರತಿಷ್ಠೆ? ಈ ಸಂಗತಿ ನಮಗೇಕೆ ಗೊತ್ತಿರಬೇಕೆಂದರೆ…

Why is Ram Mandir Prana Pratshapan on January 22 And check details

ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ ರಾಮ್ ಲಲ್ಲಾ (Lord Ram Lalla) ವಿಗ್ರಹವನ್ನು ರಾಮ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಹಾಗಾದರೆ ಪ್ರಾಣ ಪ್ರತಿಷ್ಠಾ ಎಂದರೇನು? ಇದರಲ್ಲಿನ ಆಚರಣೆಗಳು ಯಾವುವು? ಎನ್ನುವುದರ ವಿವರ ಇಲ್ಲಿದೆ.

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಆಚರಣೆ ಹೇಗೆ?

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯು ವಿಗ್ರಹವನ್ನು ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ತರುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ವಿಗ್ರಹಕ್ಕೆ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ. ಜತೆಗೆ ಸುಗಂಧ ದ್ರವ್ಯಗಳನ್ನು ಹಚ್ಚುವ ಮೂಲಕ ವಿಗ್ರಹವನ್ನು ಜೀವಂತಗೊಳಿಸಲಾಗುತ್ತದೆ. ಬಳಿಕ ಗರ್ಭಗುಡಿಯಲ್ಲಿ ವಿಗ್ರಹವನ್ನು ಇರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವಿಗ್ರಹವನ್ನು ಪ್ರಧಾನ ಅರ್ಚಕರು ಅಲಂಕರಿಸಿ ಸರಿಯಾದ ಸ್ಥಳದಲ್ಲಿ ಸ್ಥಾಪಿಸುತ್ತಾರೆ. ನಂತರ ಪುರೋಹಿತರು ಸ್ತೋತ್ರಗಳು ಮತ್ತು ಮಂತ್ರಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಮೊದಲಿಗೆ ವಿಗ್ರಹದ ಕಣ್ಣುಗಳನ್ನು ತೆರೆಯಲಾಗುತ್ತದೆ. ಈ ಪ್ರಕ್ರಿಯೆ ನಂತರ ವಿಗ್ರಹವನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ. ಈ ಎಲ್ಲ ಆಚರಣೆಗಳು ವಿಗ್ರಹಕ್ಕೆ ಜೀವ ತುಂಬುತ್ತವೆ ಎನ್ನುವ ನಂಬಿಕೆ ಇದೆ.

ಮನೆಯಲ್ಲಿ ಯಾಕೆ ವಿಗ್ರಹ ಇರಿಸಬಾರದು?

ಪ್ರಸಿದ್ಧ ಯೋಗಿ ಮತ್ತು ತತ್ವಜ್ಞಾನಿ ಸದ್ಗುರುಗಳು ಕಲ್ಲಿನ ಪ್ರತಿಮೆಯನ್ನು ಮನೆಗಳಲ್ಲಿ ಯಾಕೆ ಸ್ಥಾಪಿಸಬಾರದು ಎನ್ನುವುದಕ್ಕೆ ವಿವರಣೆ ನೀಡುತ್ತಾರೆ. ದೇವಾಲಯಗಳಲ್ಲಿನ ವಿಗ್ರಹಕ್ಕೆ ಅರ್ಚಕರು ಪ್ರತಿದಿನ ಸರಿಯಾದ ಕ್ರಮದಲ್ಲಿ ಪೂಜೆ ಸಲ್ಲಿಸುತ್ತಾರೆ. ಆದರೆ ಮನೆಯಲ್ಲಿ ಎಲ್ಲ ದಿನ ಸಂಪ್ರದಾಯಬದ್ಧವಾಗಿ ಹೀಗೆ ಮಾಡಲು ಸಾಧ್ಯವಾಗುವುದಿಲ್ಲ. ಈ ಕಲ್ಲಿನ ವಿಗ್ರಹಗಳನ್ನು ಪ್ರತಿದಿನ ಪೂಜಿಸದಿದ್ದರೆ ಅವು ಮನೆಯಿಂದ ಶಕ್ತಿಯನ್ನು ಹೀರಿಕೊಳ್ಳುತ್ತವೆ ಎಂದು ಸದ್ಗುರು ಹೇಳುತ್ತಾರೆ. ಒಮ್ಮೆ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಪರಿಗಣಿಸಲಾಗುತ್ತದೆ. ಒಮ್ಮೆ ಪ್ರಾಣ ಪ್ರತಿಷ್ಠೆಯಾದರೆ ನಂತರ ಪ್ರತಿದಿನ ಎಲ್ಲ ಆಚರಣೆಗಳೊಂದಿಗೆ ವಿಗ್ರಹಗಳನ್ನು ಪೂಜಿಸಲೇ ಬೇಕು.

ವಿಗ್ರಹವು ಪೂರ್ವಾಭಿಮುಖವಾಗಿ ಏಕೆ ಇರಬೇಕು?

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ದೇವಾಲಯದ ವಿಗ್ರಹದ ಮುಖವು ಯಾವಾಗಲೂ ಪೂರ್ವದ ಕಡೆಗೆ ಇರಬೇಕು. ಪೂರ್ವ ದಿಕ್ಕಿನಲ್ಲಿ ಸಕಾರಾತ್ಮಕ ಶಕ್ತಿ ಇದೆ ಎನ್ನುವ ನಂಬಿಕೆ ಇದಕ್ಕೆ ಕಾರಣ. ಸೂರ್ಯನು ಈ ದಿಕ್ಕಿನಲ್ಲಿ ಉದಯಿಸುವುದರಿಂದ ವಿಗ್ರಹಗಳನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಹಿಂದೂ ಸಂಪ್ರದಾಯಗಳ ದೇವರ ವಿಗ್ರಹಕ್ಕೆ ಮೊದಲ ಪೂಜೆ ಬ್ರಹ್ಮ ಮುಹೂರ್ತದಲ್ಲಿ ನಡೆಯಬೇಕು.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯ ರಾಮ್‌ಲಲ್ಲಾ ಮೂರ್ತಿಗೆ ಮೈಸೂರಿನಿಂದ ಗುಪ್ತವಾಗಿ ತೆರಳಿದ ಶಿಲೆ

Exit mobile version