Site icon Vistara News

Ram Navami: ಅಯೋಧ್ಯೆ ರಾಮ ಮಂದಿರಲ್ಲಿ ಮೊದಲ ರಾಮ ನವಮಿ; ದೇಶದ ಜನತೆಗೆ ಮೋದಿ ನೀಡಿದ ಸಂದೇಶ ಇದು

Ram Navami

Ram Navami

ನವದೆಹಲಿ: ಇಂದು (ಏಪ್ರಿಲ್‌ 17) ದೇಶಾದ್ಯಂತ ರಾಮ ನವಮಿ (Ram Navami)ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನತೆಗೆ ರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜತೆಗೆ ಅಯೋಧ್ಯೆ ರಾಮ ಮಂದಿರ (Ayodhya Ram Mandir)ದಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರದ ಮೊದಲ ರಾಮ ನವಮಿ ಒಂದು ಪೀಳಿಗೆಯ ಮೈಲಿಗಲ್ಲು. ಶತಮಾನಗಳ ಭಕ್ತಿಯನ್ನು ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಹೆಣೆಯಲಾಗುತ್ತದೆ. ಇದು ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ದಿನ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಅಯೋಧ್ಯೆಯ ರಾಮ ಮಂದಿರ ಹಲವು ವರ್ಷಗಳಿಂದ ದೇಶದ ಜನರು ಮಾಡಿದ ಕಠಿಣ ಪರಿಶ್ರಮ ಮತ್ತು ತ್ಯಾಗದ ಫಲ. ಇದು ಅಸಂಖ್ಯಾತ ರಾಮನ ಭಕ್ತರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಂತರನ್ನು ನೆನಪಿಸಿಕೊಳ್ಳುವ ಮತ್ತು ಗೌರವ ಸಲ್ಲಿಸುವ ಸಂದರ್ಭವೂ ಆಗಿದೆʼʼ ಎಂದು ಅವರು ಹೇಳಿದ್ದಾರೆ.

“ಪ್ರಭು ಶ್ರೀ ರಾಮನ ಆಶೀರ್ವಾದವು ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನೀತಿ ಮತ್ತು ಶಾಂತಿಯತ್ತ ನಡೆಯುವಂತೆ ರಾಮ ನಮಗೆ ಮಾರ್ಗದರ್ಶನ ನೀಡಲಿ. ನಮ್ಮ ಜೀವನವನ್ನು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಬೆಳಗಿಸಲಿ” ಎಂದು ಮೋದಿ ಬೇಡಿಕೊಂಡಿದ್ದಾರೆ. ʼʼಭಗವಾನ್ ರಾಮ ಭಾರತೀಯರ ಹೃದಯದಲ್ಲಿ ಆಳವಾಗಿ ಬೇರೂರಿದ್ದಾನೆ. ಮರ್ಯಾದಾ ಪುರುಷೋತ್ತಮ ಭಗವಾನ್ ರಾಮ ಅವರ ಜೀವನ ಮತ್ತು ಆದರ್ಶಗಳು ‘ವಿಕಸಿತ್‌ ಭಾರತ್’ ನಿರ್ಮಾಣಕ್ಕೆ ಬಲವಾದ ಆಧಾರವಾಗುತ್ತವೆ ಎಂಬುದರ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ರಾಮನ ಆಶೀರ್ವಾದವು ‘ಆತ್ಮ ನಿರ್ಭರ ಭಾರತ’ದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ” ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

ಅಯೋಧ್ಯೆಯಲ್ಲಿ ಭಕ್ತಜನ ಸಾಗರ

ಇನ್ನು ಅಯೋಧ್ಯೆ ರಾಮ ಮಂದಿರದತ್ತ ಭಕ್ತ ಜನ ಸಾಗರವೇ ಹರಿದು ಬಂದಿದೆ. ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮ ನವಮಿ ಆಗಿರುವ ಕಾರಣದಿಂದ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ರಾಮನಿಗೆ ಉಣಬಡಿಸಲು 56 ಬಗೆಯ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ.

Exit mobile version