Site icon Vistara News

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

Ratan Tata

ಬೆಂಗಳೂರು: ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ ಸಮೂಹದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಅವರ ನಿಧನದಿಂದ ನಿರ್ವಾತ ಸೃಷ್ಟಿಯಾಗಿದೆ. ಅವರ ಭೌತಿಕ ಅನುಪಸ್ಥಿತಿಯು ಭಾರತಕ್ಕೂ ಕರ್ನಾಟಕಕ್ಕೂ ಬಹುದೊಡ್ಡ ನಷ್ಟ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಎಂ.ಬಿ ಅಲ್ಲಿಂದಲೇ ತಮ್ಮ ಶೋಕ ಸಂದೇಶ ಕಳಿಸಿದ್ದು, ಉದ್ಯಮ ಲೋಕದ ದಿಗ್ಗಜನ‌ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು.

ಜಮ್ಷೆಡ್ಜಿ ಟಾಟಾ ಮತ್ತು ಜೆ ಆರ್ ಡಿ ಟಾಟಾ ತಮ್ಮ ವೈವಿಧ್ಯಮಯ ಉದ್ಯಮಗಳ ಮೂಲಕ ಆಧುನಿಕ ಭಾರತವನ್ನು ಕಟ್ಟಿದರು. ಇವರ ಬಳಿಕ ಎರಡು ದಶಕಗಳ ಕಾಲ‌ ಟಾಟಾ ಸಮೂಹದ ಚುಕ್ಕಾಣಿ ಹಿಡಿದಿದ್ದ ರತನ್ ಟಾಟಾ ಅವರು, ತಮ್ಮ ಸಮೂಹವನ್ನು ಜಾಗತಿಕ ಸ್ತರದಲ್ಲಿ ವಿಸ್ತರಿಸಿದರು ಎಂದು ಸಚಿವ ಎಂ.ಬಿ ಪಾಟೀಲ್‌ ಸ್ಮರಿಸಿದ್ದರು.

ಟಾಟಾ ಸಮೂಹವು ಕರ್ನಾಟಕದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದು, ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿದೆ. ರತನ್ ಟಾಟಾ ಕೂಡ ಉದ್ಯಮಶೀಲತೆಯನ್ನು ಉನ್ನತ ಮಟ್ಟದ ಮೌಲ್ಯಗಳ ಜತೆ ಪ್ರತಿನಿಧಿಸುತ್ತಿದ್ದರು. ಅವರು ಸದಾ ದೇಶ ಮತ್ತು ಸಮಾಜದ ಹಿತವನ್ನು ಕೂಡ ಪರಿಗಣಿಸುತ್ತಿದ್ದರು. ಇದರೊಂದಿಗೆ ಅವರು ಟಾಟಾ ಪರಂಪರೆಯ ವಾರಸುದಾರರಾಗಿದ್ದರು ಎಂದು ಅವರು ಅಗಲಿದ ಉದ್ಯಮಿಯ ಗುಣಗಾನ ಮಾಡಿದ್ದಾರೆ.

ಉದ್ಯಮಿ ರತನ್ ಟಾಟಾ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂತಾಪ ಸೂಚಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version