Site icon Vistara News

Rave Party: ರೇವ್‌ ಪಾರ್ಟಿ ಮೇಲೆ ಪೊಲೀಸರ ದಾಳಿ; ಅಪ್ರಾಪ್ತರು ಸೇರಿ 39 ವಿದ್ಯಾರ್ಥಿಗಳ ವಶ

Rave Party

ಲಖನೌ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಉತ್ತರ ಪ್ರದೇಶದ ಪೊಲೀಸರು ರೇವ್‌ ಪಾರ್ಟಿ (Rave Party)ಯೊಂದರ ಮೇಲೆ ದಾಳಿ ನಡೆಸಿ ಅಪ್ರಾಪ್ತರು ಸೇರಿ ಸುಮಾರು 39 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ನೋಯ್ಡಾ ಸೆಕ್ಟರ್-94ರ ಐಷಾರಾಮಿ ಸೊಸೈಟಿಯ ಫ್ಲ್ಯಾಟ್‌ನಲ್ಲಿ ರೇವ್‌ ಪಾರ್ಟಿ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು.

ʼʼಸೂಪರ್‌ನೋವಾ ಅಪಾರ್ಟ್‌ಮೆಂಟ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ಆಯೋಜಿಸಲಾಗಿತ್ತು. ಈ ವೇಳೆ ಫ್ಲ್ಯಾಟ್‌ನಲ್ಲಿ ಅನೇಕ ಮದ್ಯದ ಬಾಟಲಿ ಪತ್ತೆಯಾಗಿದೆ. ಬಂಧಿತರು ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು. ಅವರ ವಯಸ್ಸು 16ರಿಂದ 20 ವರ್ಷʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಫ್ಲ್ಯಾಟ್‌ನಿಂದ ಹೆಚ್ಚಿನ ಸಂಖ್ಯೆಯ ಹರಿಯಾಣ ಲೇಬಲ್ ಮಾಡಿದ ಮದ್ಯದ ಬಾಟಲಿಗಳು ಮತ್ತು ಹುಕ್ಕಾಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ಸಮಯದಲ್ಲಿ, ವಿದ್ಯಾರ್ಥಿಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಪಾರ್ಟಿಗೆ ಆಹ್ವಾನಿಸಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಪ್ರವೇಶ ಶುಲ್ಕವು ಪ್ರತಿ ಮಹಿಳೆಗೆ 500 ರೂ., ಜೋಡಿಗೆ 800 ರೂ. ಮತ್ತು ಪುರುಷರಿಗೆ 1,000 ರೂ. ನಿಗದಿಪಡಿಸಲಾಗಿತ್ತು. 6 ಗಂಟೆಗೆ ಪಾರ್ಟಿ ನಡೆಯಲಿದೆ ಎಂದು ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ತಿಳಿಸಲಾಗಿತ್ತು.

ಪಾನಮತ್ತ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಬಳಿಕ ಅತಿರೇಕದಿಂದ ವರ್ತಿಸಿ ಗಲಾಟೆ ಮಾಡಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಎಲ್ಲೆಂದರಲ್ಲಿ ಬಾಟಲಿ ಎಸೆದು ರಾದ್ಧಾಂತ ಮಾಡಿದ್ದಾರೆ ಎಂದು ಅಕ್ಕ ಪಕ್ಕದ ಫ್ಲ್ಯಾಟ್‌ ನಿವಾಸಿಗಳು ಆರೋಪಿಸಿದ್ದಾರೆ.

ಎಲ್ವಿಶ್‌ ಯಾದವ್‌ ವಿರುದ್ಧ ಎಫ್‌ಐಆರ್‌

ಕಳೆದ ವರ್ಷ ನವೆಂಬರ್‌ನಲ್ಲಿ ಪಾರ್ಟಿಯೊಂದರಲ್ಲಿ ಹಾವಿನ ವಿಷವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಎನ್‌ಜಿಒದಿಂದ ದೂರು ಬಂದ ಹಿನ್ನಲೆಯಲ್ಲಿ ನೋಯ್ಡಾ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಹಿಂದಿ  ಬಿಗ್‌ಬಾಸ್ ಒಟಿಟಿ ಸೀಸನ್‌ 2 ಸ್ಪರ್ಧೆಯ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಹೆಸರೂ ಇತ್ತು. ಬಳಿಕ ಎಲ್ವಿಶ್ ಯಾದವ್ ಹೆಸರನ್ನು ಎಫ್ಐಆರ್‌ನಲ್ಲಿ ಸೇರಿಸಲಾಗಿತ್ತು. ಆದರೆ 26 ವರ್ಷದ ಯೂಟ್ಯೂಬರ್ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಿಗಳಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ 20 ಎಂ.ಎಲ್‌. ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ವಶಪಡಿಸಿಕೊಂಡ ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು. ಅದನ್ನು ಎಲ್ವಿಶ್ ಯಾದವ್‌ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು.

ಇದನ್ನೂ ಓದಿ: Elvish Yadav: ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ಗೆ ಮತ್ತೆ ಸಂಕಷ್ಟ; ಎಲ್ವಿಶ್‌ ವಿರುದ್ಧ ಇಡಿ ಕೇಸ್‌

ಪ್ರಾಣಿ ಹಕ್ಕುಗಳಿಗಾಗಿ ಹೋರಾಟ ನಡೆಸುವ ಗುಂಪು ಪಿಎಫ್ಎ (People For Animals) ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪಿಎಫ್ಎ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಮೇನಕಾ ಗಾಂಧಿ ಈ ಬಗ್ಗೆ ಮಾತನಾಡಿ, ಎಲ್ವಿಶ್‌ ಯಾದವ್ ಹಾವಿನ ವಿಷವನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.

Exit mobile version