ಮುಂಬೈ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (Rs 2000 Notes) ಬ್ಯಾಂಕ್‌ಗಳಿಗೆ ಹಿಂತಿರುಗಿಸಲು ನಿಗದಿಪಡಿಸಿರುವ ಗಡುವಿನ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂತಿಮ ಅಧಿಸೂಚನೆ ಹೊರಡಿಸಿದೆ. 2 ಸಾವಿರ ರೂ. ನೋಟುಗಳನ್ನು ಹಿಂತಿರುಗಿಸಲು ಸೆಪ್ಟೆಂಬರ್ 30 ಅಂತಿಮ ದಿನ ಎಂದು ತಿಳಿಸಿದೆ. ಹಾಗಾಗಿ, 2 ಸಾವಿರ ರೂ. ಮೌಲ್ಯದ ನೋಟುಗಳು ಭಾನುವಾರದಿಂದ (ಅಕ್ಟೋಬರ್ 1) ಮೌಲ್ಯ ಕಳೆದುಕೊಳ್ಳಲಿವೆ.
ವಿದೇಶದಲ್ಲಿ ನೆಲೆಸಿರುವ ಭಾರತೀಯರು ಹಾಗೂ ಭಾರತದಲ್ಲೇ ಇರುವವರು ಸೇರಿ 24 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳನ್ನು ಇನ್ನೂ ವಾಪಸ್ ಮಾಡದ ಕಾರಣ ಆರ್‌ಬಿಐ ಇನ್ನೂ ಒಂದು ತಿಂಗಳು ಅಂದರೆ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಣೆ ಮಾಡುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಸೆಪ್ಟೆಂಬರ್ 30 ಕೊನೆಯ ದಿನ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಹಾಗಾಗಿ, ಭಾನುವಾರದಿಂದ ಪಿಂಕ್ ನೋಟುಗಳು ಬರೀ ಪೇಪರ್ ಎನಿಸಲಿವೆ. ಆರ್‌ಬಿಐ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದರೂ, ಅವು ಅಕ್ಟೋಬರ್ 1ರಿಂದ ಮೌಲ್ಯ ಕಳೆದರೂ, ಆ ನೋಟುಗಳನ್ನು ಇಟ್ಟುಕೊಳ್ಳುವುದು ಅಪರಾಧ ಅಥವಾ ಕಾನೂನುಬಾಹಿರ ಅಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ.
ಶೇ.93ರಷ್ಟು ನೋಟು ವಾಪಸ್
RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. ಆಗಿದೆ. ಆದರೆ, ಇನ್ನೂ 24 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ. ಇವುಗಳನ್ನು ಕೂಡ ಸಂಗ್ರಹಿಸುವ ದಿಸೆಯಲ್ಲಿ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ₹2000 Notes Withdrawn: ನಿಮ್ಮ ಬಳಿ ₹2000 ನೋಟು ಇನ್ನೂ ಇದೆಯಾ? ಕೊನೆಯ ಕ್ಷಣದ ಗೊಂದಲದಿಂದ ಪಾರಾಗಲು ಈಗಲೇ ಮರಳಿಸಿ
ಆರ್‌ಬಿಐ ಕಾಯ್ದೆಯ ಸೆಕ್ಷನ್ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಕಳೆದ ಮೇ 19ರಂದು ಆದೇಶ ಹೊರಡಿಸಿದೆ. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್ ನೋಟ್ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.