Site icon Vistara News

ಕಾರ್ಡ್‌ಗಳ ಟೋಕನೈಸೇಷನ್‌ ಅವಧಿ ಸೆ.30ರವರೆಗೆ ಮುಂದೂಡಿದ ಆರ್‌ಬಿಐ

tokenisation

ನವ ದೆಹಲಿ: ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳ ಟೋಕನೈಸೇಶನ್‌ಗೆ ನೀಡಲಾಗಿರುವ ಸಮಯವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಈ ಮೊದಲು ಜುಲೈ 1ರಿಂದ ಟೋಕನೈಶನ್‌ ನಿಯಮಾವಳಿ ಅನುಸರಿಸಲು ನಿಗದಿಪಡಿಸಲಾಗಿತ್ತು. ಉದ್ಯಮಿಗಳು ಕೆಲವು ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿರುವುದರಿಂದ ಸಮಯಾವಧಿ ವಿಸ್ತರಿಸಲಾಗಿದೆ. ʼಗೆಸ್ಟ್‌ ಚೆಕ್ಔಟ್ʼ ವಹಿವಾಟುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ತಲೆದೋರಿವೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಟೋಕನೈಸೇಶನ್ ಆದ ಬಳಿಕ ಆನ್‌ಲೈನ್ ಪಾವತಿಯ ಸಮಯದಲ್ಲಿ ವ್ಯಾಪಾರಿಗಳು ಕಾರ್ಡ್ ಬಳಕೆದಾರರ ಸೂಕ್ಷ್ಮ ಮಾಹಿತಿ, ಅದರ ಸಂಖ್ಯೆ ಅಥವಾ CVVಯಂತಹ ವಿವರಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಸುಮಾರು 19.5 ಕೋಟಿ ಟೋಕನ್‌ಗಳನ್ನು ಸಿದ್ಧಪಡಿಸಲಾಗಿದೆ.

ಟೋಕನೈಸೇಶನ್ ಆಯ್ಕೆಯು ಕಾರ್ಡ್‌ದಾರರಿಗೆ ಸ್ವಯಂಪ್ರೇರಿತವಾಗಿರುತ್ತದೆ. ಟೋಕನ್ ಬೇಡ ಎನ್ನುವವರು ವಹಿವಾಟಿನ ಸಮಯದಲ್ಲಿ ಕಾರ್ಡ್ ವಿವರಗಳನ್ನು ಸ್ವತಃ ನಮೂದಿಸಿ ಮೊದಲಿನಂತೆ ವಹಿವಾಟು ಮುಂದುವರಿಸಬಹುದು. ಇದನ್ನು ʼಗೆಸ್ಟ್‌ ಚೆಕ್‌ಔಟ್ ವಹಿವಾಟು’ ಎಂದು ಕರೆಯಲಾಗುತ್ತದೆ.

ಹೆಚ್ಚಿನವರು ಗೆಸ್ಟ್‌ ಚೆಕ್‌ಔಟ್‌ ಬಳಸುತ್ತಿದ್ದಾರೆ. ಆದರೆ ಇದರಲ್ಲಿ ಸಮಸ್ಯೆಗಳಿವೆ. ಟೋಕನ್‌ಗಳನ್ನು ಬಳಸಿಕೊಂಡು ಮಾಡುವ ವಹಿವಾಟುಗಳ ಬಗ್ಗೆ ಅರಿವು ಹಾಗೂ ಅದರ ಪ್ರಮಾಣ ಎಲ್ಲಾ ವರ್ಗದ ವ್ಯಾಪಾರಿಗಳಲ್ಲಿ ಇನ್ನೂ ಹೆಚ್ಚಬೇಕಿದೆ. ಇದರ ಬಗ್ಗೆ ಉದ್ಯಮಿಗಳು, ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲಾಗುತ್ತಿದೆ. ಕಾರ್ಡುದಾರರಿಗೆ ಆಗುವ ಅನಾನುಕೂಲತೆ ತಪ್ಪಿಸಲು ರಿಸರ್ವ್ ಬ್ಯಾಂಕ್ ಜುಲೈ 1ರ ಟೈಮ್‌ಲೈನ್ ಅನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಬ್ಯಾಂಕೇತರ ಸಂಸ್ಥೆಗಳು ಪ್ರಿಪೇಯ್ಡ್‌ ವ್ಯಾಲೆಟ್‌ಗಳ ಮೂಲಕ ಸಾಲ ವಿತರಿಸಕೂಡದು ಎಂದ ಆರ್‌ಬಿಐ

ಈ ಅವಧಿಯನ್ನು ಟೋಕನೈಸ್ ಮಾಡಿದ ವಹಿವಾಟುಗಳನ್ನು ನಿರ್ವಹಿಸಲು ಅಗತ್ಯ ತಯಾರಿ ಮಾಡಲು ಉದ್ಯಮಿಗಳು ಬಳಸಿಕೊಳ್ಳಬಹುದು. ಟೋಕನ್‌ ಬಳಕೆಗೆ ತಂತ್ರಜ್ಞಾನ ಬಳಸುವುದು, ಟೋಕನ್‌ ಪಡೆಯುವ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು, ವಹಿವಾಟು ನಿರ್ವಹಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ಅವಧಿ ಬಳಸಬಹುದು.

ಕಾರ್ಡ್ ಟೋಕನೈಸೇಶನ್ ಹೇಗೆ ಮಾಡಲಾಗುತ್ತದೆ?

ಟೋಕನ್ ರಚಿಸಲು, ಕಾರ್ಡ್‌ದಾರರು ಪ್ರತಿ ಆನ್‌ಲೈನ್/ಇ-ಕಾಮರ್ಸ್ ವ್ಯಾಪಾರಿಯ ವೆಬ್‌ಸೈಟ್/ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ಮತ್ತು ಟೋಕನ್ ರಚಿಸಲು ಒಪ್ಪಿಗೆ ನೀಡುವ ಮೂಲಕ ಪ್ರತಿ ಕಾರ್ಡ್‌ಗೆ ಒಂದು ಬಾರಿ ನೋಂದಣಿ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಅದರ ನಂತರ, ಕಾರ್ಡ್ ಮತ್ತು ಆನ್‌ಲೈನ್/ಇ-ಕಾಮರ್ಸ್ ವ್ಯಾಪಾರಿಗೆ ನಿರ್ದಿಷ್ಟವಾದ ಟೋಕನ್ ಅನ್ನು ರಚಿಸಲಾಗುತ್ತದೆ. ಈ ಟೋಕನ್‌ ಅನ್ನು ಯಾವುದೇ ಇತರ ವ್ಯಾಪಾರಿಗಳಲ್ಲಿ ಪಾವತಿಗೆ ಬಳಸಲಾಗುವುದಿಲ್ಲ.

ಅದೇ ವ್ಯಾಪಾರಿ ವೆಬ್‌ಸೈಟ್/ಮೊಬೈಲ್ ಅಪ್ಲಿಕೇಶನ್‌ನಲ್ಲಿ ಭವಿಷ್ಯದ ವಹಿವಾಟುಗಳನ್ನು ನಡೆಸುವಾಗ, ಚೆಕ್‌ಔಟ್ ಪ್ರಕ್ರಿಯೆಯ ಸಮಯದಲ್ಲಿ ಕಾರ್ಡ್‌ದಾರರು ಕೊನೆಯ ನಾಲ್ಕು ಅಂಕೆಯ ಮೂಲಕ ಕಾರ್ಡ್ ಅನ್ನು ಗುರುತಿಸಬಹುದು. ಹೀಗಾಗಿ, ಕಾರ್ಡ್‌ದಾರನು ಟೋಕನ್ ಅನ್ನು ನೆನಪಿಟ್ಟುಕೊಳ್ಳುವ ಅಥವಾ ನಮೂದಿಸುವ ಅಗತ್ಯವಿಲ್ಲ. ಎಷ್ಟು ಆನ್‌ಲೈನ್ ವ್ಯಾಪಾರಿಗಳಲ್ಲಿ ಬೇಕಿದ್ದರೂ ಕಾರ್ಡ್ ಅನ್ನು ಟೋಕನೈಸ್ ಮಾಡಿಸಬಹುದು.

ಇದನ್ನೂ ಓದಿ: ಕ್ರೆಡಿಟ್‌ ಕಾರ್ಡ್‌ ನಿಯಮಾವಳಿಗೆ ಡೆಡ್‌ಲೈನ್‌ ಅಕ್ಟೋಬರ್‌ 1ಕ್ಕೆ ವಿಸ್ತರಣೆ, ಯಾವೆಲ್ಲ ನಿಯಮ?

Exit mobile version