ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ವರ್ಷದ ಮೊದಲ ಹಣಕಾಸು ನೀತಿ ವರದಿಯನ್ನು ಮಂಡಿಸಿದ್ದು, ರೆಪೋ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದಾರೆ. ಹಣದುಬ್ಬರವನ್ನು ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸಲು ಬಡ್ಡಿ ದರ ಏರಿಕೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 6ರಿಂದ ಮೂರು ದಿನಗಳ ಕಾಲ ಸಭೆ ನಡೆಸಿದ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ತೆಗೆದುಕೊಂಡ ನಿರ್ಧಾರಗಳನ್ನು ದಾಸ್ ಪ್ರಕಟಿಸಿದ್ದಾರೆ. 25 ಬೇಸಿಸ್ ಪಾಯಿಂಟ್ ಹೆಚ್ಚಳದ ಮೂಲಕ ರೆಪೋ ದರಗಳು 6.5%ಕ್ಕೇರಿದಂತಾಗಿದೆ. ಹೀಗಾಗಿ ಬಡ್ಡಿದರಗಳು ಹೆಚ್ಚಲಿವೆ. 100 ಬೇಸಿಸ್ ಪಾಯಿಂಟ್ ಸೇರಿದರೆ 1 % ಆಗುತ್ತದೆ. ಹೀಗಾಗಿ ಬಡ್ಡಿ ದರದಲ್ಲಿ ೦.೨೫% ಹೆಚ್ಚಳವಾಗಲಿದೆ.
ಡಿಸೆಂಬರ್ 2022ರಲ್ಲಿ, ಆ ವರ್ಷದ ಕೊನೆಯ MPC ಸಭೆಯ ನಂತರ, RBI ರೆಪೋ ದರವನ್ನು 0.35 ಶೇಕಡಾ ಏರಿಸಿ 6.25%ಗೆ ಹೆಚ್ಚಿಸಲಾಗಿತ್ತು. ಇದು ಮಾರ್ಚ್ 2019 ರಿಂದ ನಡೆಯುತ್ತಿರುವ ಆರನೇ ಸತತ ಬಡ್ಡಿದರ ಹೆಚ್ಚಳವಾಗಿದೆ.
ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮ ಬ್ಯಾಂಕ್‌ಗಳಿಗೆ ಸಾಲ ವಿತರಣೆಗೆ ತಗಲು ವೆಚ್ಚ ಏರಿಕೆಯಾಗುತ್ತದೆ. ಹೀಗಾಗಿ ಆ ಹೊರೆಯನ್ನು ಸಾಲಗಾರರಿಗೆ ವರ್ಗಾಯಿಸುತ್ತವೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕಾರ್ಪೊರೇಟ್ ಸಾಲಗಳ ಇಎಂಐ ಹೆಚ್ಚಲಿದೆ. 2023-24 ಸಾಲಿನ ರಿಟೇಲ್ ಹಣದುಬ್ಬರವನ್ನು ಶೇ.4ಕ್ಕೆ ತಗ್ಗಿಸುವ ಗುರಿಯನ್ನು ಆರ್‌ಬಿಐ ಹೊಂದಿದ್ದು, ಇದು ಭಾರಿ ಸವಾಲಿನಿಂದಲೂ ಕೂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಜಿ20 ರಾಷ್ಟ್ರಗಳಿಂದ ಬರುವ ಪ್ರವಾಸಿಗರು ಹಣಕಾಸು ಪಾವತಿಗಳ ಸಂದರ್ಭ ಯುಪಿಐ ಅನ್ನು ನಿಗದಿತ ಏರ್‌ಪೋರ್ಟ್‌ಗಳಲ್ಲಿ ಬಳಸಬಹುದು ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.