ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಸಾಲಿನ ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ 6.5%ದಲ್ಲೇ ಉಳಿಸಿಕೊಂಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ.
ಏಪ್ರಿಲ್ 3, 5 ಮತ್ತು 6ರಂದು ಹಣಕಾಸು ನೀತಿ ಸಮಿತಿಯ (monetary policy committee) ಸಭೆ ನಡೆದಿದ್ದು, ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ದಾಸ್ ಪ್ರಕಟಿಸಿದರು. 2023-24 ಸಾಲಿನ ಮೊದಲ ಎಂಪಿಸಿ ಸಭೆ ಇದಾಗಿದ್ದು, ರೆಪೊ ದರದಲ್ಲಿ ಬದಲಾಗುವ ಸಾಧ್ಯತೆ ನಿರೀಕ್ಷಿಸಲಾಗಿತ್ತು. ಸುಸ್ಥಿರ ಪ್ರಗತಿಯ ಗತಿಯನ್ನು ಕಾಯ್ದುಕೊಳ್ಳಲು ರೆಪೊ ದರ ಬದಲಿಸದೆ ಹಾಗೇ ಉಳಿಸಿಕೊಂಡಿರುವುದಾಗಿ ದಾಸ್ ತಿಳಿಸಿದ್ದಾರೆ.
ಮೇ 2022ರಿಂದ ಸತತ ಆರು ಬಾರಿ ರೆಪೊ ದರ ಏರಿಕೆ ಕಂಡಿದೆ. RBI ಅಂದಿನಿಂದ ರೆಪೊ ದರವನ್ನು 250 bps ಹೆಚ್ಚಿಸಿದೆ. RBI MPC ಕೂಡ 5:6 ಬಹುಮತದಿಂದ ದರ ಸ್ಥಿರತೆಯ ಪರ ಮತ ಹಾಕಿತು.
FY24ರ ಮೊದಲ ದ್ವೈಮಾಸಿಕ ವಿತ್ತೀಯ ನೀತಿ ಹೇಳಿಕೆಯನ್ನು ಪ್ರಕಟಿಸಿದ ಶಕ್ತಿಕಾಂತ ದಾಸ್ ಅವರು, “ಮುಂದುವರಿದ ಆರ್ಥಿಕತೆಗಳಲ್ಲಿನ ಬ್ಯಾಂಕಿಂಗ್ ವಲಯದ ಪ್ರಕ್ಷುಬ್ಧತೆಯಿಂದಾಗಿ ಜಾಗತಿಕ ಆರ್ಥಿಕತೆಯು ಹೊಸ ಬಗೆಯ ಪ್ರಕ್ಷುಬ್ಧತೆಗಳಿಗೆ ಸಾಕ್ಷಿಯಾಗುತ್ತಿದೆ” ಎಂದು ಹೇಳಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಜಾಗತಿಕ ಹಣದುಬ್ಬರವು ಮಧ್ಯಮ ಗತಿಯಲ್ಲಿದೆ. ಭಾರತದಲ್ಲಿ ಈ ವರ್ಷ ಚಿಲ್ಲರೆ ಹಣದುಬ್ಬರವು 5.3 ಶೇಕಡಾದಿಂದ 5.2 ಶೇಕಡಕ್ಕೆ ಇಳಿಯುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಮೃದುವಾಗುವ ಸೂಚನೆಯಿದೆ. ಹಣದುಬ್ಬರದ ವಿರುದ್ಧದ ಯುದ್ಧವು ಮುಂದುವರಿಯಲಿದೆ ಎಂದರು.
SDF ದರ ಶೇಕಡಾ 6.25ನಲ್ಲಿ ಬದಲಾಗದೆ ಉಳಿದಿದೆ. MSF ಮತ್ತು ಬ್ಯಾಂಕ್ ದರಗಳು 6.75 ಶೇಕಡಾದಲ್ಲಿ ನಿರ್ವಹಿಸಲ್ಪಡುತ್ತವೆ. SDF ಬಡ್ಡಿದರದ ಕಾರಿಡಾರ್‌ನ ಕೆಳಗಿನ ಬ್ಯಾಂಡ್ ಆಗಿದ್ದರೆ, MSF ಮೇಲಿನ ಬ್ಯಾಂಡ್ ಆಗಿದೆ.