ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ದ್ವೈಮಾಸಿಕದ ರೆಪೊ ದರಗಳನ್ನು ಪ್ರಕಟಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI News) ಮುಂದುವರಿಸಿದೆ. ಸತತ ಐದನೇ ಬಾರಿಗೆ ರೆಪೊ ದರದಲ್ಲಿ ಬ್ಯಾಂಕ್ ಯಥಾಸ್ಥಿತಿ ಕಾಪಾಡಿಕೊಂಡಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿಯ ಆರು ಸದಸ್ಯರ MPC (ಹಣಕಾಸು ನೀತಿ ಸಮಿತಿ) ಸಭೆಯಲ್ಲಿ ಮುಂದಿನ ದ್ವೈಮಾಸಿಕದ ಹಣಕಾಸು ನೀತಿಯ ಬಗ್ಗೆ ತೆಗೆದುಕೊಳ್ಳಲಾದ ನಿರ್ಧಾರವನ್ನು ಶುಕ್ರವಾರ ಅನಾವರಣಗೊಳಿಸಿದ್ದಾರೆ. ಆರ್‌ಬಿಐನ ದರ ನಿಗದಿ ಸಮಿತಿಯು ತನ್ನ ಮೂರು ದಿನಗಳ ಸಭೆಯನ್ನು ಬುಧವಾರ ಆರಂಭಿಸಿತ್ತು.
— ReserveBankOfIndia (@RBI) December 8, 2023
ಆರ್‌ಬಿಐ ತನ್ನ ನಾಲ್ಕು ಹಣಕಾಸು ನೀತಿಗಳಲ್ಲಿ ಬೆಂಚ್‌ಮಾರ್ಕ್ ಪಾಲಿಸಿ ದರವನ್ನು (ರೆಪೊ) ಬದಲಾಯಿಸದೆ ಬಿಟ್ಟಿದೆ. ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ಗೆ ತಮ್ಮ ಭದ್ರತೆಗಳನ್ನು ನೀಡಿ ಹಣವನ್ನು ಎರವಲು ಪಡೆಯುವ ದರವನ್ನು ಸೂಚಿಸುತ್ತದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ವ್ಯಾಪಾರಗಳಲ್ಲಿ ಸಾಲ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಈ ದರಗಳು ಪ್ರಮುಖವಾಗಿವೆ.
RBI ಕೊನೆಯದಾಗಿ ಫೆಬ್ರವರಿಯಲ್ಲಿ ರೆಪೋ ದರವನ್ನು 6.5%ಕ್ಕೆ ಹೆಚ್ಚಿಸಿತ್ತು. ರಷ್ಯಾ- ಉಕ್ರೇನ್ ಯುದ್ಧದ ನಂತರ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳ ಪರಿಣಾಮ 2022ರ ಮೇ ತಿಂಗಳಿನಲ್ಲಿ ಬಡ್ಡಿದರ ಏರಿಕೆ ಆರಂಭವಾಗಿತ್ತು. ಆದರೆ ಇದೇ ಫೆಬ್ರವರಿ ಬಳಿಕ ಬದಲಾಗಿಲ್ಲ.
“ಆಹಾರ ಬೆಳೆಗಳ ಬೆಲೆ ಏರಿಕೆಗಳು ಮುಖ್ಯ ಹಣದುಬ್ಬರದಲ್ಲಿ ನಿರಂತರತೆಯನ್ನು ಉಂಟುಮಾಡಬಹುದು” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ತಜ್ಞರ ಪ್ರಕಾರ ಬಡ್ಡಿದರ ಈಗಾಗಲೇ ಉತ್ತುಂಗಕ್ಕೇರಿದೆ. ಆರ್‌ಬಿಐ ಬಿಗಿಯಾದ ಹಣದ ಹರಿವು ಕಾಯ್ದುಕೊಂಡ ಪರಿಣಾಮ ಅಲ್ಪಾವಧಿಯ ದರಗಳು ಶೇಕಡಾ 6.85- 6.9ರ ಆಸುಪಾಸಿನಲ್ಲಿವೆ. ಇದು ರೆಪೋ ದರಕ್ಕಿಂತ 35-40 ಬಿಪಿಎಸ್ ಹೆಚ್ಚಾಗಿದೆ.
ಮೃದುವಾದ ಹಣದುಬ್ಬರದ ಪರಿಣಾಮ 2024ರ ಮೊದಲಾರ್ಧದಲ್ಲಿ RBI ಬಡ್ಡಿದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಏರಿಕೆಯಾಗಿದೆ.