Site icon Vistara News

₹2000 Notes: 9760 ಕೋಟಿಯ 2000 ರೂ. ನೋಟು ಇನ್ನೂ ವಾಪಸ್ ಬಂದಿಲ್ಲ!

2000 rupees notes

ಹೊಸದಿಲ್ಲಿ: ಸುಮಾರು ₹9760 ಕೋಟಿ ಮೌಲ್ಯದ ₹2000 ಮುಖಬೆಲೆಯ ನೋಟುಗಳು (₹2000 Notes) ಇನ್ನೂ ಬ್ಯಾಂಕ್‌ಗೆ ಮರಳಿ ಬಂದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಶುಕ್ರವಾರ ಹೇಳಿದೆ.

2023ರ ಮೇ 19ರೊಳಗೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ 97.26 ಪ್ರತಿಶತದಷ್ಟು ₹2000 ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಲಾಗಿದೆ. ಅದಕ್ಕೂ ಮುನ್ನ ಚಲಾವಣೆಯಲ್ಲಿದ್ದ ನೋಟುಗಳ ಮೊತ್ತ ₹3.56 ಲಕ್ಷ ಕೋಟಿಗಳಷ್ಟಿತ್ತು ಎಂದು ಬ್ಯಾಂಕ್ (RBI) ಹೇಳಿದೆ.

₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ (₹2000 Notes withdrawn) ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ ಮೇ 19ರಂದು ಘೋಷಿಸಿತ್ತು. ದೇಶದಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ₹2000 ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಲು ಆರ್‌ಬಿಐ ಜನಸಾಮಾನ್ಯರಿಗೆ ಅವಕಾಶ ನೀಡಿತ್ತು. ಇದರ ಆರಂಭಿಕ ಗಡುವು ಸೆಪ್ಟೆಂಬರ್ 30 ಆಗಿತ್ತು. ನಂತರ ಅದನ್ನು ಅಕ್ಟೋಬರ್ 7ಕ್ಕೆ ವಿಸ್ತರಿಸಲಾಯಿತು.

“2023ರ ಮೇ 19ರಂದು ₹2000 ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದಾಗ ಮಾರಯಕಟ್ಟೆಯಲ್ಲಿದ್ದ ₹2000 ನೋಟುಗಳ ಒಟ್ಟು ಮೌಲ್ಯ ₹3.56 ಲಕ್ಷ ಕೋಟಿಯಷ್ಟಿತ್ತು. ಅದು ಈಗ ₹9,760 ಕೋಟಿಗೆ ಇಳಿಕೆಯಾಗಿದೆ. ಅದರಂತೆ, 97.26%ದಷ್ಟು ನೋಟುಗಳು ಹಿಂತಿರುಗಿ ಬಂದಿವೆ” ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

₹2000 ನೋಟುಗಳು ಅಮಾನ್ಯವಾಗಿಲ್ಲ, ಕಾನೂನು ಬದ್ಧವಾಗಿಯೇ ಇವೆ. ₹2000 ನೋಟುಗಳ ವಿನಿಮಯದ ಕೊನೆಯ ದಿನಾಂಕ ಅಕ್ಟೋಬರ್ 7ರಂದು ಮುಕ್ತಾಯಗೊಂಡಿದೆ. ಆದರೆ, ಆರ್‌ಬಿಐನ 19 ಕಚೇರಿಗಳಲ್ಲಿ ನೋಟುಗಳನ್ನು ಬದಲಾಯಿಸುವ ಸೌಲಭ್ಯ ಮುಂದುವರಿದಿದೆ.

ಮೇ 19ರಿಂದ ರಿಸರ್ವ್ ಬ್ಯಾಂಕ್‌ನ 19 ಇಶ್ಯೂ ಆಫೀಸ್‌ಗಳಲ್ಲಿ ₹2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಲಭ್ಯವಿತ್ತು. ಅಕ್ಟೋಬರ್ 9ರಿಂದ ₹2000 ನೋಟುಗಳನ್ನು RBI ಇಶ್ಯೂ ಆಫೀಸ್‌ಗಳು ಅವರ ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿಸಿಕೊಳ್ಳುತ್ತಿವೆ. ಇದಲ್ಲದೆ, ದೇಶದೊಳಗಿನ ಸಾರ್ವಜನಿಕರು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಯಾವುದೇ ಆರ್‌ಬಿಐ ಇಶ್ಯೂ ಕಚೇರಿಗೆ ₹2000 ನೋಟುಗಳನ್ನು ದೇಶದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ ಕಳುಹಿಸಬಹುದು” ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ₹2000 Notes Withdrawn: ನಿಮ್ಮ ಬಳಿ ₹2000 ನೋಟು ಇನ್ನೂ ಇದೆಯಾ?

Exit mobile version