ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು (₹2000 notes) ಮುದ್ರಿಸಲು 17,688 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ.
2016ರ ನವೆಂಬರ್‌ನಲ್ಲಿ ಸರ್ಕಾರವು 500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ ನಂತರ ದೊಡ್ಡ ಮೊತ್ತದ ವಹಿವಾಟುಗಳಿಗಾಗಿ ಕೇಂದ್ರೀಯ ಬ್ಯಾಂಕ್ 2,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತ್ತು. ರೂ. 2,000 ಮುಖಬೆಲೆಯ ನೋಟಿನ 89%ರಷ್ಟನ್ನು ಮಾರ್ಚ್ 2017ರ ಮೊದಲು ಹೊರಬಿಡಲಾಯಿತು. ಈ ನೋಟುಗಳು ಐದು ವರ್ಷಗಳ ಅವಧಿಯ ಉಪಯುಕ್ತ ಜೀವನ ಅಂತ್ಯದ ಸಮೀಪದಲ್ಲಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆಯಲ್ಲಿ ಚೌಧರಿ ಹೇಳಿದರು.
ಸಾರ್ವಜನಿಕರ ಕರೆನ್ಸಿ ಅವಶ್ಯಕತೆಗಳನ್ನು ಪೂರೈಸಲು ಇತರ ಮುಖಬೆಲೆಯ ನೋಟುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2,000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಅಳವಡಿಸುವಂತೆ ಎಟಿಎಂಗಳನ್ನು ಸಜ್ಜು ಮಾಡಲು ಸುಮಾರು 32 ಕೋಟಿ ರೂ. ವೆಚ್ಚ ಮಾಡಿವೆ. ಚೌಧರಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳ ಮರುಕ್ಯಾಲಿಬ್ರೇಶನ್‌ಗೆ ಸರಿಸುಮಾರು 12.8 ಕೋಟಿ ರೂ. ವೆಚ್ಚ ಮಾಡಿದೆ.
ಆರ್‌ಬಿಐ ಪ್ರಕಾರ 2017–18ನೇ ಹಣಕಾಸು ವರ್ಷದಿಂದ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಒಟ್ಟು ಮೌಲ್ಯ 7.4 ಲಕ್ಷ ಕೋಟಿ ರೂಪಾಯಿಯಾಗಿದೆ. ಮುಂದಿನ ವರ್ಷಗಳಲ್ಲಿ ಆರ್‌ಬಿಐ ಯಾವುದೇ ಹೊಸ 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಿಲ್ಲ.
ಮೇ 19ರಂದು ಕೇಂದ್ರ ಬ್ಯಾಂಕ್ ಕ್ಲೀನ್ ನೋಟ್ ನೀತಿಯ ಅಡಿಯಲ್ಲಿ ಚಲಾವಣೆಯಲ್ಲಿರುವ ಈ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಸೆ.30ರವರೆಗೆ ಬ್ಯಾಂಕ್ ಶಾಖೆಗಳಲ್ಲಿ ರೂ.2000 ನೋಟುಗಳನ್ನು ಠೇವಣಿ ಇಡುವಂತೆ ಅಥವಾ ವಿನಿಮಯ ಮಾಡಿಕೊಳ್ಳುವಂತೆ ನಾಗರಿಕರಿಗೆ ಸೂಚಿಸಿತು. ನಂತರ ಅವಧಿಯನ್ನು ಅಕ್ಟೋಬರ್ 7ಕ್ಕೆ ವಿಸ್ತರಿಸಲಾಯಿತು.
ಅಂದು ಚಲಾವಣೆಯಲ್ಲಿದ್ದ ಈ ಕರೆನ್ಸಿ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇಂದು ಇನ್ನೂ 9,760 ಕೋಟಿ ರೂಪಾಯಿಗಳಷ್ಟು ನೋಟುಗಳು ಬ್ಯಾಂಕ್‌ಗಳಿಂದ ಆಚೆ ಉಳಿದುಕೊಂಡಿವೆ. ಹಿಂದಿರುಗಿದ ನೋಟುಗಳ ವಿಲೇವಾರಿಗೆ ನಿಗದಿಪಡಿಸಿದ ಕಾರ್ಯವಿಧಾನವನ್ನು ಆರ್‌ಬಿಐ ಅನುಸರಿಸುತ್ತಿದೆ.
2,000 ರೂಪಾಯಿ ನೋಟು ಕಾನೂನುಬದ್ಧ ನೋಟು ಆಗಿಯೇ ಉಳಿದಿದೆ ಎಂದು ಆರ್‌ಬಿಐ ಒತ್ತಿ ಹೇಳಿದೆ. ಠೇವಣಿದಾರರು ಆರ್‌ಬಿಐನ 19 ಇಶ್ಯೂ ಕಚೇರಿಗಳಲ್ಲಿ ಒಂದು ಬಾರಿಗೆ ಕೇವಲ 20,000 ರೂ.ಗಳಷ್ಟು ಮೌಲ್ಯದ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಇದನ್ನೂ ಓದಿ: ₹2000 Notes: 9760 ಕೋಟಿಯ 2000 ರೂ. ನೋಟು ಇನ್ನೂ ವಾಪಸ್ ಬಂದಿಲ್ಲ!