ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank Of India) ಹಣಕಾಸು ನೀತಿ ಸಮಿತಿಯ 6 ಸದಸ್ಯರ 3 ದಿನಗಳ ಸಭೆ ಇಂದು ಅಂತ್ಯಗೊಂಡಿದ್ದು, ಹಲವು ಹೊಸ ಉಪಕ್ರಮಗಳನ್ನು ಘೋಷಿಸಿದೆ. ಹೊಸ ಯುಪಿಐ (UPI) ಆಧಾರಿತ ನಗದು ಠೇವಣಿ (cash depossit) ಸೌಲಭ್ಯ ಅವುಗಳಲ್ಲಿ ಒಂದು. ಚಿಲ್ಲರೆ ನೇರ ಹೂಡಿಕೆದಾರರಿಗೆ ಹೊಸ ಮೊಬೈಲ್ ಆಪ್ ಇನ್ನೊಂದು. ಹಾಗೆಯೇ ಸತತ 7ನೇ ಅವಧಿಗೆ ರೆಪೊ ದರಗಳನ್ನು (Repo Rates) ಆರ್‌ಬಿಐ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದು, 6.5% ಬಡ್ಡಿ ದರವನ್ನು (Interest rates) ಕಾಪಾಡಿಕೊಂಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikant Das) ನಡೆಸಿದ ಹಣಕಾಸು ನೀತಿ ಸಭೆ (RBI MPC meet) ಬಳಿಕ ಇದನ್ನು ಪ್ರಕಟಿಸಿದರು.
ರೆಪೊ ದರಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಎಂದರೆ, ಉಳಿತಾಯ ಹಾಗೂ ಸಾಲದ ಬಡ್ಡಿ ದರಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಎಂದರ್ಥ. ಎಂದರೆ ನಿಮ್ಮ ಗೃಹ ಸಾಲದ ಇಎಂಐಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಭಾರತೀಯ ಮಾರುಕಟ್ಟೆ ಸ್ಥಿರವಾಗಿದೆ ಎಂಬ ಸಂದೇಶವನ್ನು ಇದು ನೀಡುತ್ತಿದೆ, ಸತತ ಏಳನೇ ಬಾರಿಗೆ ಹೀಗೆ ದರಗಳನ್ನು ಉಳಿಸಿಕೊಳ್ಳಲಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯ ವಾಣಿಜ್ಯ ಅದರಲ್ಲಿರುವ ಎಲ್ಲ ಭಾಗೀದಾರರಿಗೆ ತೃಪ್ತಿಕರವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕ್ 2024-25ರ ದೇಶದ ಜಿಡಿಪಿ ಬೆಳವಣಿಗೆಯನ್ನು 7% ಎಂದು ಅಂದಾಜಿಸಿದೆ. ಇದು ಕೂಡ ಈ ಹಿಂದಿನ ಅಂದಾಜಿಗಿಂತ 0.50% ಹೆಚ್ಚು. ಅಂದರೆ ಇದು ಹೆಚ್ಚು ತೀವ್ರಗತಿಯ ಬೆಳವಣಿಗೆಯನ್ನು ಸೂಚಿಸಿದೆ. ಜಿಡಿಪಿಯ ಸ್ಥಿರಗತಿಯು ದೇಶದ ಮಾರುಕಟ್ಟೆಯ ದೃಢತೆಯನ್ನು ಸೂಚಿಸುತ್ತದೆ. ಹಾಗೆಯೇ ಹಣದುಬ್ಬರವನ್ನು ಕೂಡ ನಿಯಂತ್ರಿಸಲಾಗಿದೆ. ಫೆಬ್ರವರಿಯಲ್ಲಿ ಹಣದುಬ್ಬರವು ಸರಾಸರಿ 4.5%ಕ್ಕೆ ಇಳಿದಿವೆ. ಭಾರತದ ಆರ್ಥಿಕತೆಯು 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಬೆಳೆದಿದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಚಲನೆ.
ಇನ್ನು ಆಧುನಿಕ ಸುಧಾರಣಾ ಕ್ರಮಗಳು. ಯುಪಿಐ (UPI) ಆಧಾರಿತ ನಗದು ಠೇವಣಿ (cash depossit) ಸೌಲಭ್ಯವನ್ನು ಪ್ರಕಟಿಸಲಾಗಿದೆ. UPI ಅನ್ನು ಪ್ರಾಥಮಿಕವಾಗಿ ಪೀರ್-ಟು-ಪೀರ್ ವಹಿವಾಟುಗಳು, ಬಿಲ್ ಪಾವತಿಗಳು, ವ್ಯಾಪಾರಿ ವಹಿವಾಟುಗಳು ಮತ್ತು ಇತರ ಡಿಜಿಟಲ್ ಪಾವತಿಗಳಿಗಾಗಿ ಬಳಸಲಾಗುತ್ತದೆ. ಇನ್ನು ಮುಂದೆ, ಎಟಿಎಂ/ಡೆಬಿಟ್ ಕಾರ್ಡ್‌ನ ಬದಲಿಗೆ ನಿಮ್ಮ ಯುಪಿಐ ಬಳಸಿಯೂ ನಗದು ಠೇವಣಿ ಯಂತ್ರಗಳಲ್ಲಿ (ಸಿಡಿಎಂಗಳು) ಹಣವನ್ನು ಠೇವಣಿ ಮಾಡಲು ನಿಮಗೆ ಸಾಧ್ಯವಾಗುತ್ತದೆ. UPI ಭಾರತದಲ್ಲಿ ಅದರ ಅನುಕೂಲತೆ, ವೇಗ ಮತ್ತು ಕಾರ್ಯಸಾಧ್ಯತೆಯಿಂದಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇದು ದೇಶದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಗೆ ಕೊಡುಗೆ ನೀಡಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು RBI ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯುಪಿಐ ಪಾವತಿ ಭಾರತ ಸಕ್ಸಸ್ ಸ್ಟೋರಿಗಳಲ್ಲಿ ಒಂದು. UPIಯ ಜನಪ್ರಿಯತೆ ಮತ್ತು ಸ್ವೀಕಾರವನ್ನು ಪರಿಗಣಿಸಿದರೆ ಇದು ಕೂಡ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ.
ತನ್ನ ಚಿಲ್ಲರೆ ನೇರ ಹೂಡಿಕೆದಾರರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡುವುದಾಗಿ ಆರ್‌ಬಿಐ ಘೋಷಿಸಿರುವುದು ಇನ್ನೊಂದು ಉಪಕ್ರಮ. ಆರ್‌ಬಿಐಯ ಚಿಲ್ಲರೆ ನೇರ ಯೋಜನೆಯು ಚಿಲ್ಲರೆ ಹೂಡಿಕೆದಾರರಿಗೆ ನೇರವಾಗಿ ಸರ್ಕಾರಿ ಸೆಕ್ಯುರಿಟಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಇದು ಏಜೆಂಟ್‌ಗಳ ಅಗತ್ಯವನ್ನು ನಿವಾರಿಸುತ್ತದೆ. ಈ ಯೋಜನೆಯನ್ನು G-Sec ಹೂಡಿಕೆಗಳಿಗೆ ವೈಯಕ್ತಿಕ ಹೂಡಿಕೆದಾರರ ಪ್ರವೇಶವನ್ನು ಸರಳಗೊಳಿಸಲು 2020ರಲ್ಲಿ ಪರಿಚಯಿಸಲಾಗಿದೆ. ಇತರ ಹೂಡಿಕೆ ಅಪ್ಲಿಕೇಶನ್‌ಗಳಂತೆಯೇ ಇದು ಹೂಡಿಕೆಗಳನ್ನು ಸುಲಭವಾಗಿ ಖರೀದಿಸಲು, ಮಾರಾಟ ಮಾಡಲು, ನಿಮ್ಮ ಪೋರ್ಟ್‌ಫೋಲಿಯೊ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು, ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಮಾರುಕಟ್ಟೆ ಡೇಟಾವನ್ನು ಪ್ರವೇಶಿಸಲು ಅನುಮತಿಸುತ್ತದೆ. ಇದು ಹೂಡಿಕೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಅನುಕೂಲಕರ ಮಾಡುತ್ತದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜಕಾರಣಿಗಳಿಗೆ ಮಾತಿನ ಮೇಲೆ ನಿಯಂತ್ರಣ ಇರಲಿ
ಈ ವರ್ಷ ತನ್ನ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಆರ್‌ಬಿಐ, 90 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯವನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದೆ. 99.99% ಶುದ್ಧ ಬೆಳ್ಳಿಯ, ಸುಮಾರು 40 ಗ್ರಾಂ ತೂಕದ ಈ ವಿಶಿಷ್ಟ ಸ್ಮರಣಾರ್ಥ ನಾಣ್ಯವು ಒಂಬತ್ತು ದಶಕಗಳ ಆರ್‌ಬಿಐನ ಶ್ರೀಮಂತ ಇತಿಹಾಸ ಮತ್ತು ಸಾಧನೆಗಳನ್ನು ಸಂಕೇತಿಸುತ್ತದೆ. ಏಪ್ರಿಲ್ 1, 1935ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆರ್‌ಬಿಐ, ಉದಾರೀಕರಣದ ನಂತರ ಮೂಲಭೂತ ಬ್ಯಾಂಕಿಂಗ್ ಕಾರ್ಯಗಳಾದ ವಿತ್ತೀಯ ನೀತಿ, ಬ್ಯಾಂಕ್ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮತ್ತು ಪಾವತಿ ವ್ಯವಸ್ಥೆಯ ಮೇಲ್ವಿಚಾರಣೆ, ಹಣಕಾಸು ಮಾರುಕಟ್ಟೆಗಳ ಅಭಿವೃದ್ಧಿಗಳಿಗೆ ಒತ್ತು ನೀಡಿದೆ. ವಿತ್ತೀಯ ಸ್ಥಿರತೆಯನ್ನು ಭದ್ರಪಡಿಸುವ ದೃಷ್ಟಿಯಿಂದ ವಿದೇಶಿ ವಿನಿಮಯ ಮೊತ್ತ ಕಾಪಾಡಿಕೊಳ್ಳುವುದು, ದೇಶದ ಕ್ರೆಡಿಟ್ ಮತ್ತು ಕರೆನ್ಸಿ ವ್ಯವಸ್ಥೆಯನ್ನು ಅದರ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವುದು ಮುಂತಾದ ಕ್ರಮಗಳ ಮೂಲಕ ಸ್ಥಿರ ಹಣಕಾಸು ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವುದು ಮೆಚ್ಚುಗೆಗೆ ಅರ್ಹವಾಗಿದೆ.