Site icon Vistara News

Recession: ಅಮೆರಿಕದಲ್ಲಿ ತೀವ್ರ ಆರ್ಥಿಕ ಕುಸಿತ, ಭಾರತಕ್ಕೂ ಆತಂಕ: ಅರ್ಥಶಾಸ್ತ್ರಜ್ಞರ ಎಚ್ಚರಿಕೆ

recession

ಹೊಸದಿಲ್ಲಿ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೀಘ್ರದಲ್ಲೇ ಆಳವಾದ ಆರ್ಥಿಕ ಹಿಂಜರಿತ (deep Recession in USA) ತಲೆದೋರಬಹುದು. ಇದು ಭಾರತವನ್ನೂ ಬಾಧಿಸಲಿದೆ ಎಂದು ಉನ್ನತ ಅರ್ಥಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.

ಖಾಸಗಿ ಚಾನೆಲ್‌ನಲ್ಲಿ ನಡೆದ ವಿಶೇಷ ಸಂವಾದದಲ್ಲಿ ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಆಧಾರ್‌ ಪ್ರಾಧಿಕಾರದ ಅರೆಕಾಲಿಕ ಅಧ್ಯಕ್ಷರಾಗಿರುವ ನೀಲಕಂಠ ಮಿಶ್ರಾ ಇದನ್ನು ಹೇಳಿದ್ದಾರೆ. ಅಮೆರಿಕದ ವಿತ್ತೀಯ ಕುಸಿತವು ಭಾರತದ GDPಯನ್ನೂ (India GDP) ಬಾಧಿಸಲಿದೆ. ಯಾಕೆಂದರೆ ಭಾರತದ ಜಿಡಿಪಿಯ ಆಧಾರಗಳಲ್ಲಿ ಒಂದಾದ ಐಟಿ ಸೇವಾ ವಲಯವನ್ನು (IT sector) ಅದು ಬಾಧಿಸಲಿದೆ. ಮಾತ್ರವಲ್ಲದೆ ಬಾಂಡ್ ಮತ್ತು ಇಕ್ವಿಟಿ ಮಾರುಕಟ್ಟೆಗಳಲ್ಲೂ ಸಾಕಷ್ಟು ಚಂಚಲತೆಯನ್ನು ತರುತ್ತದೆ ಎಂದಿದ್ದಾರೆ.

ಈ ವರ್ಷ ಅಮೆರಿಕಕ್ಕೆ ಆರ್ಥಿಕ ಹಿಂಜರಿತ ಕಾಲೂರುವ, ಅದರ ಜಿಡಿಪಿ ಬೆಳವಣಿಗೆ ಕುಸಿಯುವ ನಿರೀಕ್ಷೆಯಿತ್ತು. ಆದರೆ ಅದು ಸಂಭವಿಸಲಿಲ್ಲ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಜನ ತಾವು ಸುರಕ್ಷಿತ ಎಂದು ಭಾವಿಸಿದರು. ಆದರೆ ಈ ವರ್ಷ, ಅಮೆರಿಕದ ವಿತ್ತೀಯ ಕೊರತೆ ಅವರ GDPಯ 4%ರಷ್ಟು ಹೆಚ್ಚಾಗಿದೆ ಎಂದು ನಮ್ಮ ವಿಶ್ಲೇಷಣೆ ಹೇಳುತ್ತದೆ. ಅವರು 1 ಲಕ್ಷ ಕೋಟಿ ಡಾಲರ್‌ ವಿತ್ತೀಯ ಕೊರತೆ ಅಂದಾಜಿಸಿದ್ದರು. ಆದರೆ 2 ಲಕ್ಷ ಕೋಟಿ ಡಾಲರ್‌ ಆಗಿದೆ. ವಿತ್ತೀಯ ಕೊರತೆ ತುಂಬಾ ಹೆಚ್ಚಿದೆ. ಇದನ್ನು ಕಡಿಮೆ ಮಾಡದೇ ಇದ್ದರೆ ಆರ್ಥಿಕತೆಯ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಿಶ್ರಾ ಹೇಳಿದರು.

ಮುಂದಿನ ವರ್ಷ ವಿತ್ತೀಯ ಕೊರತೆಯನ್ನು ಇಳಿಸಲು ಅವರು ಬಯಸಿದರೂ ಸಾಧ್ಯವಾಗದು. ಹಣಕಾಸಿನ ಕೊರತೆ ತುಂಬಾ ಹೆಚ್ಚಿರುವುದರಿಂದ, ಯಾರೂ ಯುಎಸ್ ಬಾಂಡ್‌ಗಳನ್ನು ಖರೀದಿಸಲು ಬಯಸುವುದಿಲ್ಲ. ದರಗಳು ಏರುತ್ತಿವೆ. ಇದು ಪ್ರಪಂಚದಾದ್ಯಂತ ಬೇಡಿಕೆಯ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಸಂಭವಿಸುವ ಆರ್ಥಿಕ ಹಿಂಜರಿತ ಬಹಳ ಆಳವಾದದ್ದಾಗಿರಬಹುದು ಎಂದು ಎಚ್ಚರಿಸಿದ್ದಾರೆ.

ಭಾರತದ ಮೇಲೇನು ಪರಿಣಾಮ?

ಇದು ಭಾರತದ ಮೇಲೆ ನಾಲ್ಕು ಮಾರ್ಗಗಳ ಮೂಲಕ ಪರಿಣಾಮ ಬೀರಬಹುದು. ಯುಎಸ್ ಆರ್ಥಿಕ ಹಿಂಜರಿತದಿಂದ ನಮ್ಮ ಐಟಿ ಸೇವೆಗಳ ಉದ್ಯಮ ಮತ್ತು ನಮ್ಮ ವ್ಯಾಪಾರ ಸೇವೆಗಳ ರಫ್ತುಗಳಿಗೆ ಹೊಡೆತ ಬೀಳಬಹುದು. ಸೇವೆಗಳ ರಫ್ತುಗಳು ಭಾರತದ ರಫ್ತಿನ 10%ರಷ್ಟಿದೆ. ಅವು ಬಹಳಷ್ಟು ಕುಸಿದರೆ, ನಾವು ಜಿಡಿಪಿ ಬೆಳವಣಿಗೆಯ 1%ನಷ್ಟು ಕಳೆದುಕೊಳ್ಳಬಹುದು ಎಂದು ಮಿಶ್ರಾ ಹೇಳಿದರು.

ಎರಡನೆಯ ಮಾರ್ಗವೆಂದರೆ ಸರಕುಗಳ ರಫ್ತಿನ ಮೇಲೆ ಪರಿಣಾಮ. ಸರಕುಗಳ ಬೇಡಿಕೆ ಕುಸಿಯುತ್ತದೆ. ಇದು ಈಗಾಗಲೇ ಚೀನಾ, ಯುರೋಪ್ ಮತ್ತು ಜಪಾನ್‌ನಲ್ಲಿ ಕಡಿಮೆಯಾಗಿದೆ ಎಂದು ಎಚ್ಚರಿಸಿದ್ದಾರೆ. ಭಾರತದಲ್ಲಿ ಉತ್ಪನ್ನಗಳನ್ನು ಡಂಪ್ ಮಾಡುವುದು ಇನ್ನೊಂದು ದೊಡ್ಡ ಅಪಾಯ. ಬೇಡಿಕೆ ಚೇತರಿಸಿಕೊಳ್ಳುವ ಏಕೈಕ ದೇಶವಾಗಿ ಭಾರತ ಉಳಿದಿದ್ದರೆ, ಪ್ರತಿ ತಯಾರಕರೂ ಇಲ್ಲಿ ಮಾರಾಟ ಮಾಡಲು ಬಯಸುತ್ತಾರೆ. ಇದು ಭಾರತೀಯ ತಯಾರಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ನಾಲ್ಕನೆಯ ಸಮಸ್ಯೆಯೆಂದರೆ US ಆರ್ಥಿಕ ಹಿಂಜರಿತವು ಅದರ ಸರ್ಕಾರಿ ಬಾಂಡ್‌ನ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಇತರ ಆರ್ಥಿಕತೆಗಳಿಗೆ ಬಂಡವಾಳದ ವೆಚ್ಚವು ಹೆಚ್ಚಾಗುತ್ತದೆ. ಭಾರತದಲ್ಲಿನ ದೊಡ್ಡ ಸಾಲಗಾರರು ಸಾಲವನ್ನು ಮೊದಲೇ ಸುಲಭವಾಗಿ ಪಡೆಯುತ್ತಾರೆ. ಆದರೆ ಅಂತಹ ಸಾಲಗಳು ಕಳೆದ 6-8 ತಿಂಗಳುಗಳಿಂದ ಲಭ್ಯವಿಲ್ಲ. ಇದು ಬಾಂಡ್ ಮಾರುಕಟ್ಟೆಗಳು ಮತ್ತು ಈಕ್ವಿಟಿ ಮಾರುಕಟ್ಟೆಗಳಂತಹ ಹಣಕಾಸು ಮಾರುಕಟ್ಟೆಗಳಲ್ಲಿ ಚಂಚಲತೆ ತರುತ್ತದೆ ಎಂದಿದ್ದಾರೆ.

ತಯಾರಾಗುವುದು ಹೇಗೆ?

ಕಚ್ಚಾ ತೈಲದ ಬೆಲೆ ಈಗಾಗಲೇ ಕಳೆದ ಎರಡು-ಮೂರು ದಿನಗಳಲ್ಲಿ ಕುಸಿಯಲು ಪ್ರಾರಂಭಿಸಿದೆ. ಏಕೆಂದರೆ ಜನ ಆರ್ಥಿಕ ಹಿಂಜರಿತದ ಭಯವನ್ನು ಅನುಭವಿಸಲು ಆರಂಭಿಸಿದ್ದಾರೆ. ಮುಂದಿನ ವರ್ಷ ಮೇ-ಜೂನ್‌ನಲ್ಲಿ ಯುಎಸ್ ಆರ್ಥಿಕ ಹಿಂಜರಿತಕ್ಕೆ ಹೋದರೆ, ತೈಲ ಬೆಲೆಗಳು ಇನ್ನಷ್ಟು ಕಡಿಮೆಯಾಗುತ್ತವೆ. ಅಥವಾ ತೈಲ ಬೆಲೆ ಏರಿಕೆಯಾದರೆ ಅದು ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ನಿಭಾಯಿಸಲು ಸ್ಥೂಲ ಆರ್ಥಿಕ ಸ್ಥಿರತೆಯ ಮೇಲೆ ಗಮನ ಹರಿಸಬೇಕು. ರಿಸ್ಕ್‌ ತೆಗೆದುಕೊಳ್ಳುವ ಬದಲು ಪ್ರಕ್ಷುಬ್ಧತೆಯ ಅಲೆಗಳನ್ನು ಎದುರಿಸುವತ್ತ ಕಣ್ಣಿಡಬೇಕು ಎಂದಿದ್ದಾರೆ.

Exit mobile version