Site icon Vistara News

India Canada Row: ಅತ್ತ ದರಿ ಇತ್ತ ಪುಲಿ; ಭಾರತದ ಜತೆಗಿನ ಸಂಬಂಧ ಮುಖ್ಯ ಎಂದ ಕೆನಡಾ ಸಚಿವ

India involved in Canada elections Says intelligence report

ಒಟ್ಟಾವ: ಒಂದು ಕಡೆ ಹೋದರೆ ‘ಖಲಿಸ್ತಾನಿಗಳು’ ಎಂಬ ಪಾತಾಳ ಜಸ್ಟಿನ್‌ ಟ್ರುಡೋ ಅವರಿಗಾಗಿ ಕಾಯುತ್ತಿದೆ. ಖಲಿಸ್ತಾನಿಗಳನ್ನು ಎದುರು ಹಾಕಿಕೊಂಡರೆ ಟ್ರುಡೋ ಅಧಿಕಾರವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ (India Canada Row) ಇದೆ ಎಂಬುದಕ್ಕೆ ಸಾಕ್ಷ್ಯವೇ ಇಲ್ಲದೆ ಕೆನಡಾ ಒದ್ದಾಡುತ್ತಿದೆ. ಹಾಗಾಗಿ, ಕೆನಡಾ ಪರಿಸ್ಥಿತಿ ಈಗ ‘ಅತ್ತ ದರಿ ಇತ್ತ ಪುಲಿ’ (ಆ ಕಡೆ ಪಾತಾಳ, ಈ ಕಡೆ ಹುಲಿ) ಎಂಬಂತಾಗಿದೆ. “ಭಾರತದ ಜತೆಗಿನ ಸಂಬಂಧ ಕೆನಡಾಗೆ ಮುಖ್ಯ” ಎಂದು ಆ ದೇಶದ ರಕ್ಷಣಾ ಸಚಿವ ಬಿಲ್‌ ಬ್ಲೇರ್‌ (Bill Blair) ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

“ಭಾರತ ಹಾಗೂ ಕೆನಡಾ ಸಂಬಂಧವು ಪ್ರಮುಖವಾಗಿದೆ. ನಮಗೆ ಭಾರತದ ಜತೆಗಿನ ಒಪ್ಪಂದ, ಸಂಬಂಧ ಮುಖ್ಯವಾಗಿದೆ. ವೀಸಾ, ರಕ್ಷಣೆ ಸೇರಿ ಹಲವು ವಿಷಯಗಳಲ್ಲಿ ಎರಡೂ ದೇಶಗಳ ಬಾಂಧವ್ಯ ಚೆನ್ನಾಗಿದೆ. ಇದನ್ನು ಕೆನಡಾ ಕೂಡ ಗೌರವಿಸುತ್ತದೆ. ಹಾಗೆಯೇ, ಕೆನಡಾ ಕಾನೂನು ಹಾಗೂ ನಾಗರಿಕರ ರಕ್ಷಣೆಯೂ ನಮ್ಮ ಆದ್ಯತೆಯಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಭಾರತ ಸಹಕಾರ ನೀಡಲಿದೆ ಎಂಬ ನಂಬಿಕೆ ಇದೆ” ಎಂದು ಬಿಲ್‌ ಬ್ಲೇರ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಭಾರತದ ವಿರುದ್ಧ ಕೆನಡಾ ಹಲವು ಆರೋಪ ಮಾಡಿದೆ. ಆದರೂ, ಅಮೆರಿಕವು ತನಿಖೆಗೆ ಸಹಕರಿಸಿ ಎಂದಷ್ಟೇ ಭಾರತಕ್ಕೆ ಹೇಳಿದೆ. ಅಮೆರಿಕ ಮಾಜಿ ರಕ್ಷಣಾ ಅಧಿಕಾರಿಯೊಬ್ಬರಂತೂ, ಅಮೆರಿಕಕ್ಕೆ ಭಾರತವೇ ಪ್ರಥಮ ಆದ್ಯತೆಯಾಗಲಿ ಎಂದು ಹೇಳಿದ್ದಾರೆ. ಇನ್ನು ನಿಜ್ಜರ್‌ ಹತ್ಯೆಯ ಕುರಿತು ಕೆನಡಾ ಯಾವುದೇ ದಾಖಲೆ, ಮಾಹಿತಿ ನೀಡಿಲ್ಲ ಎಂದು ಭಾರತ ತಿರುಗೇಟು ನೀಡಿದೆ. ಅಷ್ಟೇ ಏಕೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಪರ ನಿಂತ ಜಸ್ಟಿನ್‌ ಟ್ರುಡೋ ವಿರುದ್ಧ ಅಮೆರಿಕದಲ್ಲೇ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ

ಕೆನಡಾದಲ್ಲಿ ಜೂನ್‌ 18ರಂದು ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್‌ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.

Exit mobile version