Site icon Vistara News

Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

Reliance Disney

Reliance, Disney announce merger, Nita Ambani to head merged entity

ಮುಂಬೈ: ದೇಶದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮುಕೇಶ್‌ ಅಂಬಾನಿ ಒಡೆತನದ ರಿಲಿಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (Reliance Industries Limited) ಹಾಗೂ ಅಮೆರಿಕದ ವಾಲ್ಟ್‌ ಡಿಸ್ನಿ ಕಂಪನಿಯು (Walt Disney Company) ವಿಲೀನಗೊಂಡಿದ್ದು, ದೇಶದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಸುಮಾರು 70,352 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ರಿಲಯನ್ಸ್‌ ಹಾಗೂ ಡಿಸ್ನಿ ವಿಲೀನದ ಸಂಸ್ಥೆಗೆ ನೀತಾ (Nita Ambani) ಅಂಬಾನಿಯವರೇ ಮುಖ್ಯಸ್ಥರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಒಪ್ಪಂದದಂತೆ ರಿಲಯನ್ಸ್‌ ಕಂಪನಿಯ ವಯಾಕಾಮ್‌ 18 ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ವಾಲ್ಟ್‌ ಡಿಸ್ನಿ ಕಂಪನಿಯ ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿಲೀನಗೊಳ್ಳಲಿವೆ. ಜಾಯಿಂಟ್‌ ವೆಂಚರ್‌ನಲ್ಲಿ ರಿಲಯನ್ಸ್‌ ಕಂಪನಿಯು ಮೊದಲು 11,500 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಒಟ್ಟು 70,352 ಕೋಟಿ ರೂ. ಹೂಡಿಕೆಯಾಗಲಿದೆ. ಹೂಡಿಕೆ ಪ್ರಕ್ರಿಯೆ ಮುಗಿದ ಬಳಿಕ ಇಡೀ ಜಾಯಿಂಟ್‌ ವೆಂಚರ್‌ನ ನಿಯಂತ್ರಣವು ರಿಲಯನ್ಸ್‌ ಬಳಿಯ ಇರಲಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.

ಒಪ್ಪಂದದ ಪ್ರಕಾರ, ಜಾಯಿಂಟ್‌ ವೆಂಚರ್‌ನಲ್ಲಿ ರಿಲಯನ್ಸ್‌ ಷೇರುಗಳ ಪಾಲು ಶೇ.16.34ರಷ್ಟು, ವಯಾಕಾಮ್‌ 18 ಪಾಲು ಶೇ.46.82ರಷ್ಟು ಹಾಗೂ ಶೇ.36.84ರಷ್ಟು ಪಾಲು ಡಿಸ್ನಿಯದ್ದು ಇರಲಿದೆ. ನೀತಾ ಅಂಬಾನಿಯು ಜಾಯಿಂಟ್‌ ವೆಂಚರ್‌ನ ಮುಖ್ಯಸ್ಥೆಯಾದರೆ, ಉದಯ್‌ ಶಂಕರ್‌ ಅವರು ಉಪಾಧ್ಯಕ್ಷರಾಗಿರಲಿದ್ದಾರೆ. ಇದರೊಂದಿಗೆ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಎರಡೂ ಕಂಪನಿಗಳು ಒಗ್ಗೂಡಿ, ಕ್ರಾಂತಿ ಮಾಡಲು ಮುಂದಾಗಿವೆ. ಇದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

ಟಿವಿ, ಡಿಜಿಟಲ್‌ ಸ್ಟ್ರೀಮಿಂಗ್‌, ಮನರಂಜನೆ, ಸ್ಪೋರ್ಟ್ಸ್‌, ಕ್ಷೇತ್ರದಲ್ಲಿ ಈಗಾಗಲೇ ವಯಾಕಾಮ್‌ ಹಾಗೂ ಸ್ಟಾರ್‌ ಇಂಡಿಯಾ ಛಾಪು ಮೂಡಿಸಿವೆ. ಮನರಂಜನೆ ಕ್ಷೇತ್ರದಲ್ಲಿ ಕಲರ್ಸ್‌, ಸ್ಟಾರ್‌ಪ್ಲಸ್‌, ಸ್ಟಾರ್‌ಗೋಲ್ಡ್‌, ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್‌ಸ್ಪೋರ್ಟ್ಸ್‌, ಸ್ಪೋರ್ಟ್ಸ್‌ 18, ಒಟಿಟಿಯಲ್ಲಿ ಜಿಯೋ ಸಿನಿಮಾ ಹಾಗೂ ಹಾಟ್‌ಸ್ಟಾರ್‌ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ಮನೆಮಾತಾಗಿವೆ. ಈಗ ಎರಡೂ ಕಂಪನಿಗಳು ವಿಲೀನಗೊಂಡಿದ್ದು, ಭಾರತದಲ್ಲಿ ಸುಮಾರು 75 ಕೋಟಿ ಜನರನ್ನು ತಲುಪಲು ಯೋಜನೆ ರೂಪಿಸಿವೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version