Site icon Vistara News

Physical Abuse: ನಿವೃತ್ತ ಐಎಎಸ್‌ ಅಧಿಕಾರಿ ಪತ್ನಿಯ ಮೇಲೆ ಮಲಮಗನಿಂದಲೇ ಅತ್ಯಾಚಾರ!

Physical Abuse

Retired IAS Officer's Wife Allegedly Raped By Stepson, His Aide In Jammu Kashmir

ಶ್ರೀನಗರ: ಆಧುನಿಕ ಕಾಲದಲ್ಲಿ ಕಾಮದ ಮುಂದೆ ಸಂಬಂಧಗಳೂ ಗೌಣವಾಗಿವೆ. ದಿನ ಬೆಳಗಾದರೆ ಅಜ್ಜಿಯ ಮೇಲೆ ಮೊಮ್ಮಗನಿಂದ ಅತ್ಯಾಚಾರ, ಬಾಲಕಿ ಮೇಲೆ ಚಿಕ್ಕಪ್ಪನಿಂದ ಲೈಂಗಿಕ ಕಿರುಕುಳ (Physical Abuse), ಚಿಕ್ಕಪ್ಪನ ಮಗಳ ಮೇಲೆ ಯುವಕನಿಂದ ಲೈಂಗಿಕ ದೌರ್ಜನ್ಯದಂತಹ ಹಲವು ಸುದ್ದಿಗಳನ್ನು ಓದುತ್ತೇವೆ, ಕೇಳುತ್ತೇವೆ. ಇಂತಹ ಅನಾಚಾರಕ್ಕೆ ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದಲ್ಲಿ (Jammu Kashmir) ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಪತ್ನಿಯ ಮೇಲೆ ಮಲಮಗನೇ ಅತ್ಯಾಚಾರ ಎಸಗಿರುವುದು ಸಂಚಲನ ಮೂಡಿಸಿದೆ.

ಉತ್ತರ ಪ್ರದೇಶದ ಮೂಲದವರಾದ, ಸುಮಾರು 40 ವರ್ಷದ ಮಹಿಳೆಯು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಘಾಜಿಪುರದಲ್ಲಿರುವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಜಮ್ಮು-ಕಾಶ್ಮೀರದ ಮನೆಯೊಂದರಲ್ಲಿ ನನ್ನನ್ನು ಕೂಡಿಹಾಕಿದ್ದು, ಮಲಮಗ ಹಾಗೂ ಆತನ ಸ್ನೇಹಿತನು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ನು ಪತಿಯ ಕುಟುಂಬಸ್ಥರು ನನ್ನ ಮೇಲೆ ಹಲ್ಲೆ, ನಿರಂತರವಾಗಿ ಕಿರುಕುಳ ನೀಡಿದ್ದಾರೆ. ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡಿದ್ದಾರೆ” ಎಂಬುದಾಗಿ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಮ್ಮು-ಕಾಶ್ಮೀರ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿಯನ್ನು ಉತ್ತರ ಪ್ರದೇಶದ ಮಹಿಳೆಯು 2020ರಲ್ಲಿ ಮದುವೆಯಾಗಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿಯು ಇವರನ್ನು ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ತಂದೆ-ತಾಯಿ ಇಲ್ಲದ ಅನಾಥ ಮಹಿಳೆಯು, ಜೀವನಕ್ಕೊಂದು ಆಸರೆಯಾಯಿತು ಎಂದು ನಿವೃತ್ತ ಅಧಿಕಾರಿಯನ್ನು ಮದುವೆಯಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ಅಲ್ಲಿ ಅವರ ಮೇಲೆ ಅಧಿಕಾರಿಯ ಮೊದಲ ಪತ್ನಿಯ ಮಗ ಹಾಗೂ ಆತನ ಸ್ನೇಹಿತನು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

“ಕಾಶ್ಮೀರದ ಒಂದು ಮನೆಯಲ್ಲಿ ನನ್ನನ್ನು ಕೂಡಿಹಾಕಿದ್ದರು. ಏಪ್ರಿಲ್‌ 11ರಿಂದ 14ರ ಅವಧಿಯಲ್ಲಿ ನನ್ನನ್ನು ಕೂಡಿ ಹಾಕಿದ್ದರು. ಎಷ್ಟೇ ಹಸಿವು ಎಂದರೂ ನನಗೆ ಒಂದು ತೊಟ್ಟು ನೀರು ಕೂಡ ಕೊಡಲಿಲ್ಲ. ನನ್ನ ಪತಿಯ ಮೊದಲ ಹೆಂಡತಿಯ ಮಗನು ನನ್ನಿಂದ ಮೊಬೈಲ್‌ ಕಸಿದುಕೊಂಡ. ನಂತರ ಅವನು ಹಾಗೂ ಆತನ ಸ್ನೇಹಿತ ಸೇರಿ ನನ್ನ ಮೇಲೆ ಅತ್ಯಾಚಾರ ಎಸಗಿದರು. ಇದಾದ ಬಳಿಕ ನಾನು ಅಂಗಲಾಚಿಕೊಂಡೆ. ಇಲ್ಲಿಂದ ಬಿಟ್ಟರೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬುದಾಗಿ ಲಿಖಿತವಾಗಿ ಬರೆಸಿಕೊಂಡ ಬಳಿಕವೇ ನನ್ನನ್ನು ಬಿಟ್ಟರು” ಎಂದು ದೂರಿನಲ್ಲಿ ಮಹಿಳೆಯು ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

Exit mobile version