Site icon Vistara News

Revant Reddy: ಲಂಚ ಪ್ರಕರಣದಲ್ಲಿ ಒಂದು ತಿಂಗಳು ಜೈಲಲ್ಲಿದ್ದ ರೇವಂತ್‌ ರೆಡ್ಡಿ ಈಗ ತೆಲಂಗಾಣ ಸಿಎಂ!

revanth reddy

revanth reddy

ಹೈದರಾಬಾದ್‌: ತೆಲಂಗಾಣ ರಾಜ್ಯದ ಮೊದಲ ಕಾಂಗ್ರೆಸ್‌ ಸಿಎಂ ಆಗಿ ರೇವಂತ್‌ ರೆಡ್ಡಿ (Revant Reddy) ಅವರು ಗುರುವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ, ಶಾಸಕರೊಬ್ಬರಿಗೆ 50 ಲಕ್ಷ ರೂ. ಲಂಚದ ಆಮಿಷ ಒಡ್ಡಿದ ಆರೋಪದಲ್ಲಿ ರೇವಂತ್‌ ರೆಡ್ಡಿ 2015ರಲ್ಲಿ ಸುಮಾರು ಒಂದು ತಿಂಗಳು ಜೈಲಿನಲ್ಲಿದ್ದರು! ಆಗ ಅವರು ತೆಲುಗು ದೇಶಂ ಪಕ್ಷದಲ್ಲಿದ್ದರು.

ವಿಧಾನ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ರೇವಂತ್‌ ರೆಡ್ಡಿ ಅವರು ಎಲ್ವಿಸ್‌ ಸ್ಟೀಫನ್ಸನ್‌ ಎಂಬ ನಾಮನಿರ್ದೇಶಿತ ಸದಸ್ಯರಿಗೆ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ 50 ಲಕ್ಷ ರೂ. ಲಂಚದ ಆಮಿಷ ಒಡ್ಡಿದ ಆರೋಪ ಕೇಳಿ ಬಂದಿತ್ತು. ಆಗ ಎಸಿಬಿ ದಾಳಿ ನಡೆಸಿ ರೇವಂತ್‌ ರೆಡ್ಡಿ ಮತ್ತು ಇತರ ಇಬ್ಬರನ್ನು 2015ರ ಮೇ 31ರಂದು ಬಂಧಿಸಿತ್ತು.

ಎಲ್ವಿಸ್ ಸ್ಟೀಫನ್‌ಸನ್‌ ಜೊತೆಗೆ ₹5 ಕೋಟಿ ಡೀಲ್ ಮಾಡಿಕೊಂಡು ₹50 ಲಕ್ಷ ನೀಡುತ್ತಿರುವ ವಿಡಿಯೋ ಬಹಿರಂಗವಾಗಿತ್ತು. ಎಲ್ವಿಸ್ ಆಗ ಆಡಳಿತಾರೂಢ ಟಿಆರ್‌ಎಸ್‌ನ ಆಂಗ್ಲೋ-ಇಂಡಿಯನ್ ಸಮುದಾಯದ ನಾಮನಿರ್ದೇಶಿತ ಶಾಸಕರಾಗಿದ್ದರು. ಹೈದರಾಬಾದ್‌ನ ಚೆರ್ಲಪಲ್ಲಿ ಸೆಂಟ್ರಲ್‌ ಜೈಲಿನಲ್ಲಿದ್ದ ರೇವಂತ್‌ ರೆಡ್ಡಿಗೆ ಜುಲೈ 1ರಂದು ಹೈಕೋರ್ಟ್‌ ಜಾಮೀನು ನೀಡಿತ್ತು. 2020ರಲ್ಲಿ ಅಂದಿನ ಸಿಎಂ ಚಂದ್ರಶೇಖರ್‌ ರಾವ್‌ ಮಗ ಕೆ ಟಿ ರಾಮರಾವ್ ಅವರ ಫಾರ್ಮ್‌ಹೌಸ್ ಮೇಲೆ ಅಕ್ರಮವಾಗಿ ಡ್ರೋನ್ ಹಾರಿಸಿ ಅದರ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ ರೇವಂತ್ ಅವರನ್ನು ಮತ್ತೆ ಬಂಧಿಸಲಾಗಿತ್ತು.

ಎಬಿವಿಪಿ ಮೂಲ

ರೇವಂತ್‌ ರೆಡ್ಡಿ ಒಂದು ಕಾಲದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (Akhila Bharatha Vidyarthi Parishat) ಅಗ್ರ ನಾಯಕ ಆಗಿದ್ದರು. ಅದೇ ನಾಯಕ ಈಗ ತೆಲಂಗಾಣ ರಾಜ್ಯದಲ್ಲಿ (Telangana Elections 2023) ಕಾಂಗ್ರೆಸ್‌ನ್ನು ವಿಜಯದತ್ತ (Congress win) ಮುನ್ನುಗ್ಗಿಸಿ ಮುಖ್ಯಮಂತ್ರಿ ಪಟ್ಟಕ್ಕೆ (Chief Minister post) ಏರಿದ್ದಾರೆ. ಬಳಿಕ ಸ್ವತಂತ್ರವಾಗಿ ತಮ್ಮ ಚರಿಷ್ಮಾ ಬೆಳೆಸಿಕೊಂಡು ತೆಲುಗು ದೇಶಂ ಪಾರ್ಟಿಯಲ್ಲೂ ತಮ್ಮ ಕರಾಮತ್ತು ತೋರಿಸಿ ಕಾಂಗ್ರೆಸ್‌ನ ತೆಲಂಗಾಣ ರಾಜ್ಯಾಧ್ಯಕ್ಷರಾಗಿದ್ದರು ರೇವಂತ ರೆಡ್ಡಿ. ತಮ್ಮ 54ನೇ ವಯಸ್ಸಿನಲ್ಲಿ ಸಿಎಂ ಹುದ್ದೆಗೇರಿದ್ದಾರೆ.

ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿಯನ್ನು ಮುಳುಗಿಸಿ ಕಾಂಗ್ರೆಸ್‌ ಧ್ವಜ ಹಾರಿಸಿದ ರೇವಂತ್‌ ರೆಡ್ಡಿ ಅವರು, ಕಾಮರೆಡ್ಡಿ ಕ್ಷೇತ್ರದಲ್ಲಿ ಕೆ. ಚಂದ್ರಶೇಖರ ರಾವ್‌ ಅವರನ್ನು ಸೋಲಿಸಿದ ಸಾಧನೆಯನ್ನೂ ಮಾಡಿದ್ದಾರೆ.

ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಅವರು, ಈಗ ಮಲ್ಕಜ್‌ಗಿರಿ ಲೋಕಸಭಾ ಕ್ಷೇತ್ರದ ಸದಸ್ಯರು. 2017ರಲ್ಲಿ ಕಾಂಗ್ರೆಸ್‌ ಸೇರಿದ್ದ ಅವರು 2021ರ ಜುಲೈ ತಿಂಗಳಲ್ಲಿ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲಿಂದ ಬಳಿಕ ಕಾಂಗ್ರೆಸ್‌ ನ್ನು ತಳಮಟ್ಟದಿಂದ ಮೇಲೆತ್ತಿ ಈಗ ಬಿಆರ್‌ಎಸ್‌ ಸೋಲಿಗೆ ಕಾರಣವಾಗಿದ್ದಾರೆ. ಅವರು ಅಧ್ಯಕ್ಷರಾದ ದಿನದಿಂದಲೇ ಬೀದಿ ಹೋರಾಟಗಳ ಮೂಲಕ ಸಂಘಟನೆಯನ್ನು ಬಲಗೊಳಿಸಲು ಆರಂಭಿಸಿದ್ದರು.

ಪಕ್ಷದೊಳಗೇ ಅವರಿಗೆ ವಿರೋಧವಿತ್ತು

ನಿಜವೆಂದರೆ, ರೇವಂತ್‌ ರೆಡ್ಡಿಗೆ ಪಕ್ಷದೊಳಗೆ ಎಲ್ಲವೂ ಸುಲಲಿತವಾಗಿರಲಿಲ್ಲ. ಬೇರೆ ಪಕ್ಷದಿಂದ ಬಂದವರು ಎಂಬ ಕಾರಣಕ್ಕಾಗಿ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕ ಮಾಡುವುದಕ್ಕೆ ವಿರೋಧವಿತ್ತು. ಆದರೆ, ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ರೇವಂತ್‌ ರೆಡ್ಡಿ ಕರ್ನಾಟಕದ ಕಾಂಗ್ರೆಸ್‌ ನಾಯಕರಿಂದ‌ ಸ್ಫೂರ್ತಿ ಪಡೆದು ದೊಡ್ಡ ನಾಯಕರಾಗಿ ಬೆಳೆದರು. ಪಕ್ಷದ ರಾಷ್ಟ್ರೀಯ ನಾಯಕರ ಜತೆಗೆ ಕಾಣಿಸಿಕೊಂಡರು. ದೊಡ್ಡ ಮಟ್ಟದ ರ‍್ಯಾಲಿಗಳನ್ನು ನಡೆಸಿದರು. ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.

ರೇವಂತ್‌ ರೆಡ್ಡಿ ರಾಜಕೀಯ ಬದುಕಿನ ಹಾದಿ

ಇದನ್ನೂ ಓದಿ: Pralhad Joshi: ರಾಜಸ್ಥಾನದಲ್ಲಿ ಬಿಜೆಪಿ ಗೆಲುವು; ಪ್ರಲ್ಹಾದ್‌ ಜೋಶಿ ಉಸ್ತುವಾರಿಯಲ್ಲಿ ಮತ್ತೊಂದು ಯಶಸ್ಸು

Exit mobile version