ಗುಜರಾತ್ (Gujarat) ಭಾರತದ ಪ್ರಮುಖ ವ್ಯಾಪಾರ ತಾಣಗಳಲ್ಲಿ ಒಂದಾಗಿದ್ದು, ಇದು ದೇಶಕ್ಕೆ ಕೆಲವು ಉನ್ನತ ಕೈಗಾರಿಕೋದ್ಯಮಿಗಳನ್ನು ನೀಡಿದೆ. ಆದರೆ ಸಮೃದ್ಧಿ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಇಲ್ಲಿರುವ ಪುಟ್ಟ ಗ್ರಾಮವೊಂದು ಏಷ್ಯಾದ ಶ್ರೀಮಂತ (richest village in Asia) ಗ್ರಾಮವಾಗಿ (Richest Village) ಗುರುತಿಸಿಕೊಂಡಿದೆ.
ಕಛ್‌ನಲ್ಲಿರುವ ಮಾಧಾಪರ್ ಅನ್ನು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿ ಆರ್ಥಿಕ ಸಮೃದ್ಧಿಗೇನೂ ಕೊರತೆಯಿಲ್ಲ. ಭುಜ್‌ನ ಹೊರವಲಯದಲ್ಲಿರುವ ಈ ಗ್ರಾಮದ ನಿವಾಸಿಗಳು 7,000 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಇದು ಅವರು ಎಷ್ಟು ಶ್ರೀಮಂತರು ಎಂಬುದನ್ನು ಹೇಳುತ್ತದೆ.
ಮಾಧಾಪರ್‌ನಲ್ಲಿ ಪಟೇಲ್ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರ ಜನಸಂಖ್ಯೆಯು ಸುಮಾರು 32,000 ಎಂದು ಅಂದಾಜಿಸಲಾಗಿದೆ. ಇದು 2011 ರಲ್ಲಿ 17,000 ಆಗಿತ್ತು.
ಈ ಹಳ್ಳಿಯು ಹೆಚ್ ಡಿಎಫ್ ಸಿ ಬ್ಯಾಂಕ್, ಎಸ್‌ಬಿಐ, ಪಿಎನ್‌ಬಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳನ್ನು ಒಳಗೊಂಡಂತೆ 17 ಬ್ಯಾಂಕ್‌ಗಳನ್ನು ಹೊಂದಿದೆ. ಇದು ಒಂದೇ ಹಳ್ಳಿಗೆ ಅಸಾಮಾನ್ಯವಾಗಿದೆ. ಅದರ ಹೊರತಾಗಿಯೂ ಹೆಚ್ಚಿನ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ಹೊಂದಿವೆ.
ಗ್ರಾಮದ ಈ ಏಳಿಗೆಯ ಹಿಂದಿನ ಕಾರಣವೆಂದರೆ ಅನಿವಾಸಿ ಭಾರತೀಯ ಕುಟುಂಬಗಳು. ಅವರು ಸ್ಥಳೀಯ ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಪ್ರತಿ ವರ್ಷ ಕೋಟಿ ರೂ. ಗಳನ್ನು ಠೇವಣಿ ಮಾಡುತ್ತಾರೆ. ಗ್ರಾಮವು ಸುಮಾರು 20,000 ಮನೆಗಳನ್ನು ಹೊಂದಿದೆ. ಆದರೆ ಸುಮಾರು 1,200 ಕುಟುಂಬಗಳು ವಿದೇಶದಲ್ಲಿ ಅದರಲ್ಲೂ ಹೆಚ್ಚಾಗಿ ಆಫ್ರಿಕನ್ ದೇಶಗಳಲ್ಲಿ ವಾಸಿಸುತ್ತಿವೆ.
ಮಧ್ಯ ಆಫ್ರಿಕಾದಲ್ಲಿನ ನಿರ್ಮಾಣ ವ್ಯವಹಾರಗಳಲ್ಲಿ ಗುಜರಾತಿಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಈ ಪ್ರದೇಶ ದೊಡ್ಡ ವಲಸಿಗ ಜನಸಂಖ್ಯೆಯ ಭಾಗವಾಗಿದೆ. ಅನೇಕರು ಯುಕೆ, ಆಸ್ಟ್ರೇಲಿಯಾ, ಅಮೆರಿಕ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ವಾಸಿಸುತ್ತಿದ್ದಾರೆ.
ಅನೇಕ ಗ್ರಾಮಸ್ಥರು ವಿದೇಶದಲ್ಲಿ ವಾಸಿಸುತ್ತಿದ್ದರೂ, ಅಲ್ಲೇ ಕೆಲಸ ಮಾಡಿಕೊಂಡಿದ್ದರೂ ಅವರು ತಮ್ಮ ಗ್ರಾಮದೊಂದಿಗೆ ನಂಟು ಹೊಂದಿದ್ದಾರೆ ಮತ್ತು ಅವರು ವಾಸಿಸುವ ಸ್ಥಳಕ್ಕಿಂತ ಹೆಚ್ಚಾಗಿ ತಮ್ಮ ಹಣವನ್ನು ಇಲ್ಲಿನ ಬ್ಯಾಂಕ್‌ಗಳಲ್ಲಿ ಇಡಲು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರುಲ್ಬೆನ್ ಕಾರ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: Job market: ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ; ವರ್ಷಾಂತ್ಯದೊಳಗೆ ಹೊಸಬರ ನೇಮಕಕ್ಕೆ ಮುಂದಾದ ಶೇ. 72ರಷ್ಟು ಕಂಪನಿಗಳು!
ಗ್ರಾಮದ ಬ್ಯಾಂಕ್ ಗಳಲ್ಲಿ ಅಪಾರ ಠೇವಣಿ ಇಡುವುದರಿಂದ ಗ್ರಾಮ ಸಮೃದ್ಧಿಯಾಗಿದೆ. ನೀರು, ನೈರ್ಮಲ್ಯ ಮತ್ತು ರಸ್ತೆಯಂತಹ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿದೆ. ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕೆರೆಗಳು ಮತ್ತು ದೇವಾಲಯಗಳು ಬಂಗಲೆಗಳಿವೆ ಎನ್ನುತ್ತಾರೆ ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್‌ನ ಸ್ಥಳೀಯ ಶಾಖಾ ವ್ಯವಸ್ಥಾಪಕರು.