Site icon Vistara News

13 ವರ್ಷಗಳ ಕಾರ್ಯಾಚರಣೆ ಬಳಿಕ ಭೂಮಿಗೆ ಮರಳಿದ ರಿಸ್ಯಾಟ್‌-2 ಉಪಗ್ರಹ

risat 2 satellite

ನವ ದೆಹಲಿ: 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭಾರತದ ರೇಡಾರ್ ಇಮೇಜಿಂಗ್ ಉಪಗ್ರಹ (ರಿಸ್ಯಾಟ್-2) ಭೂಮಿಗೆ ಮರು ಪ್ರವೇಶ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ತಿಳಿಸಿದೆ.

ರಿಸ್ಯಾಟ್‌ ಬಾಹ್ಯಾಕಾಶ ನೌಕೆಯು ಅಕ್ಟೋಬರ್ 30ರಂದು ಜಕಾರ್ತಾ ಬಳಿ ಹಿಂದೂ ಮಹಾಸಾಗರದ ಮೇಲೆ ಅಪ್ಪಳಿಸಿತು. 2009ರಲ್ಲಿ 300 ಕಿಲೋಗ್ರಾಂ ತೂಕದ ನೌಕೆ ಹೊರಟಿತ್ತು. ನಾಲ್ಕು ವರ್ಷಗಳ ಕಾರ್ಯಾಚರಣೆಯನ್ನು ಅದರಿಂದ ನಿರೀಕ್ಷಿಸಲಾಗಿತ್ತು. ಇದಕ್ಕಾಗಿ ರಿಸ್ಯಾಟ್ 30 ಕೆಜಿ ಇಂಧನವನ್ನು ಹೊಂದಿತ್ತು. ಇದೀಗ ಮರುಪ್ರವೇಶದ ವೇಳೆಗೆ ಉಪಗ್ರಹದಲ್ಲಿ ಯಾವುದೇ ಇಂಧನ ಉಳಿದಿಲ್ಲ. ಹೀಗಾಗಿ ಅದು ಮಾಲಿನ್ಯ ಸೃಷ್ಟಿಸಿಲ್ಲ ಅಥವಾ ಸ್ಫೋಟಗೊಂಡಿಲ್ಲ.

“ಇಸ್ರೋದ ಈ ಬಾಹ್ಯಾಕಾಶ ನೌಕೆ ಕಕ್ಷೆಯಲ್ಲಿ ಗರಿಷ್ಠ ಪರಿಣಾಮಕಾರಿ ನಿರ್ವಹಣೆ, ಇಂಧನದ ಗರಿಷ್ಠ ಬಳಕೆಗಳೊಂದಿಗೆ 13 ವರ್ಷಗಳವರೆಗೆ ಬಹಳ ಉಪಯುಕ್ತವಾದ ಪೇಲೋಡ್ ಡೇಟಾ ಒದಗಿಸಿದೆ. ಅದರ ಪೇಲೋಡ್‌ ಸೇವೆಗಳು ಇನ್ನಿತರ ಹಲವು ಬಾಹ್ಯಾಕಾಶ ಅಪ್ಲಿಕೇಶನ್‌ಗಳಿಗೆ ಬಳಸಿಕೊಳ್ಳಲಾಗಿದೆ” ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ | ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ

ಕಳೆದ ಒಂದು ತಿಂಗಳಿನಿಂದ ಭಾರತೀಯ ಸಿಸ್ಟಮ್ ಫಾರ್ ಸೇಫ್ ಅಂಡ್ ಸಸ್ಟೈನಬಲ್ ಸ್ಪೇಸ್ ಆಪರೇಷನ್ ಮ್ಯಾನೇಜ್‌ಮೆಂಟ್ (IS4OM) ವತಿಯಿಂದ ಈ ರಿಸ್ಯಾಟ್‌ನ ಭೂ ಮರುಪ್ರವೇಶವನ್ನು ನಿರ್ವಹಿಸಲಾಗಿತ್ತು. VSSC ಮತ್ತು ISTRAC ತಂಡಗಳು ಆಂತರಿಕವಾಗಿ ಅಭಿವೃದ್ಧಿಪಡಿಸಿದ ವಿಶ್ಲೇಷಣಾ ಸಾಫ್ಟ್‌ವೇರ್ ಮತ್ತು ಮಲ್ಟಿ ಆಬ್ಜೆಕ್ಟ್ ಅನ್ನು ಬಳಸಿಕೊಂಡು ಇದನ್ನು ಟ್ರ್ಯಾಕ್ ಮಾಡಿದವು. ಶ್ರೀಹರಿಕೋಟಾದಲ್ಲಿ ಇದರ ಟ್ರ್ಯಾಕಿಂಗ್ ರಾಡಾರ್ ಇದೆ.

“ರಿಸ್ಯಾಟ್-2 ಬಾಹ್ಯಾಕಾಶ ನೌಕೆಯ ಸಮರ್ಥ ಕಾರ್ಯಾಚರಣೆ ಹಾಗೂ ಮರುಪ್ರವೇಶಗಳು ನಿಖರ ಸಾಮರ್ಥ್ಯದ ಸ್ಪಷ್ಟ ಉದಾಹರಣೆಯಾಗಿದೆ. 13.5 ವರ್ಷಗಳ ನಂತರ ಯಶಸ್ವಿಯಾಗಿ ಭೂಮಿಗೇ ಮರಳುವ ಮೂಲಕ ಬಾಹ್ಯಾಕಾಶ ಕಸವನ್ನು ಸೃಷ್ಟಿಸದ ಅಂತಾರಾಷ್ಟ್ರೀಯ ನೀತಿಗೆ ಬದ್ಧವಾಗಿ ರಿಸ್ಯಾಟ್‌ ಮಾದರಿಯಾಗಿದೆʼʼ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ | ವಿಸ್ತಾರ Explainer | ರಷ್ಯಾದ ನಷ್ಟ ಭಾರತಕ್ಕೆ ಲಾಭ! ನಾಳೆ ವನ್‌ವೆಬ್ ಉಪಗ್ರಹಗಳ ಉಡಾವಣೆ

Exit mobile version