Site icon Vistara News

Road Accident: ಭೀಕರ ರಸ್ತೆ ಅಪಘಾತ; 5 ಶಾಲಾ ವಿದ್ಯಾರ್ಥಿಗಳ ಸಾವು

Road Accident

Road Accident

ಚಂಡಿಗಢ: ಹರಿಯಾಣದಲ್ಲಿ ಭೀಕರ ರಸ್ತೆ ಅಪಘಾತವೊಂದು (Road Accident) ನಡೆದಿದ್ದು, 5 ಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 40 ವಿದ್ಯಾರ್ಥಿಗಳಿದ್ದ ಶಾಲಾ ಬಸ್​ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 20 ಮಂದಿಗೆ ಗಾಯಗಳಾಗಿವೆ. ಮಹೇಂದ್ರಗಢ ಜಿಲ್ಲೆಯ ಕನಿನಾ ದಾದ್ರಿ ರಸ್ತೆಯಲ್ಲಿ ಗುರುವಾರ (ಏಪ್ರಿಲ್‌ 11) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಈದ್-ಉಲ್-ಫಿತರ್ ರಜಾದಿನದ ಹೊರತಾಗಿಯೂ ಶಾಲೆ ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼʼಜಿ.ಎಲ್. ಪಬ್ಲಿಕ್ ಶಾಲೆ (GL Public School)ಗೆ ಸೇರಿದ ಬಸ್ ಇದಾಗಿದ್ದು, ಕನಿನಾದ ಉನ್ಹಾನಿ ಗ್ರಾಮದ ಬಳಿ ಪಲ್ಟಿಯಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಬಸ್‌ ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬಸ್‌ ಪಲ್ಟೊಯಾಗಿತ್ತುʼʼ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಮಾಹಿತಿ ನೀಡಿದ್ದಾರೆ. ಚಾಲನೆ ವೇಳೆ ಡ್ರೈವರ್‌ ಪಾನಮತ್ತನಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಗಾಯಗೊಂಡ 12 ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ ಬಸ್‌ನ ಫಿಟ್ನೆಸ್ ಪ್ರಮಾಣಪತ್ರ ಅವಧಿ ಆರು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಮುಕ್ತಾಯಗೊಂಡಿತ್ತು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಹೇಂದ್ರಗಢದ ಪೊಲೀಸ್ ವರಿಷ್ಠಾಧಿಕಾರಿ ಅರ್ಶ್ ವರ್ಮಾ ಅಪಘಾತದ ಬಗ್ಗೆ ಮಾತನಾಡಿ, ʼʼಈ ಸ್ಕೂಲ್‌ ಬಸ್ ಮತ್ತೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸದ್ಯ ಬಸ್ ಚಾಲಕನನ್ನು ಬಂಧಿಸಲಾಗಿದೆʼʼ ಎಂದು ತಿಳಿಸಿದರು. ಚಾಲಕ ಮದ್ಯ ಪಾನ ಮಾಡಿದ್ದ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, “ನಾವು ಆತನನ್ನು ಬಂಧಿಸಿದ್ದೇವೆ ಮತ್ತು ಆತನ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅದರ ನಂತರ ಆತ ನಿಜವಾಗಿಯೂ ಕುಡಿದಿದ್ದನೇ ಅಥವಾ ಇಲ್ಲವೇ ಎಂಬುದನ್ನು ತಿಳಿದು ಬರಲಿದೆ” ಎಂದು ಹೇಳಿದರು.

ಚಾಲಕ ಅತಿವೇಗದ ಚಾಲನೆಯಲ್ಲಿ ತೊಡಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಹರಿಯಾಣದ ಶಿಕ್ಷಣ ಸಚಿವೆ ಸೀಮಾ ತ್ರಿಖಾ ಅವರು ಮಹೇಂದ್ರಗಢಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Road Accident: ಬೈಕ್‌ ಚಲಾಯಿಸುತ್ತಿದ್ದ ತಂದೆ- ಮಗ ಅಪಘಾತದಲ್ಲಿ ಸಾವು

Exit mobile version