Site icon Vistara News

Road Accident: ಟೆಂಪೋ ಟ್ರಾವೆಲರ್‌ ಆಳವಾದ ಕಮರಿಗೆ ಉರುಳಿ ಕನಿಷ್ಠ 8 ಮಂದಿ ಸಾವು

Road Accident

Road Accident

ಡೆಹ್ರಾಡೂನ್‌: ಉತ್ತರಾಖಂಡ (Uttarakhand)ದ ರುದ್ರಪ್ರಯಾಗದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಟೆಂಪೋ ಟ್ರಾವೆಲರ್‌ ಆಳವಾದ ಕಮರಿಗೆ ಉರುಳಿ 8 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಟೆಂಪೋ ಟ್ರಾವೆಲರ್‌ನಲ್ಲಿ ಒಟ್ಟು 23 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದ್ದು, ಋಷಿಕೇಶ-ಬದ್ರಿನಾಥ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಕಮಾಂಡೆಂಟ್ (SDRF) ಮಣಿಕಾಂತ್ ಮಿಶ್ರಾ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ (Road Accident).

ʼʼಟೆಂಪೊ ಟ್ರಾವೆಲರ್‌ನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆʼʼ ಎಂದು ಮಣಿಕಾಂತ್ ಮಿಶ್ರಾ ಹೇಳಿದ್ದಾರೆ. ಎಸ್‌ಡಿಆರ್‌ಎಫ್‌ ಮತ್ತು ಪೊಲೀಸ್ ತಂಡಗಳು ರಕ್ಷಣಾ ಕಾರ್ಯವನ್ನು ನಡೆಸುತ್ತಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈವರೆಗೆ ಗಾಯಗೊಂಡ ಇಬ್ಬರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ. ತೀವ್ರ ಗಾಯಗೊಂಡವರನ್ನು ಹೆಲಿಕಾಫ್ಟರ್‌ ಮೂಲಕ ಋಷಿಕೇಷ್‌ನ ಏಮ್ಸ್‌ (AIIMS Rishikesh)ಗೆ ಕರೆದೊಯ್ಯಲಾಗಿದೆ.

ಆಘಾತ ವ್ಯಕ್ತಪಡಿಸಿದ ಸಿಎಂ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, “ರುದ್ರಪ್ರಯಾಗ್ ಜಿಲ್ಲೆಯಲ್ಲಿ ಟೆಂಪೊ ಟ್ರಾವೆಲರ್ ಅಪಘಾತದ ಸುದ್ದಿ ಕೇಳಿ ದುಃಖವಾಗಿದೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಲಾಗಿದೆ. ಭಗವಂತ ಮೃತ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

ರಾಜಸ್ತಾನದಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ಸಾವು

ರಾಜಸ್ತಾನದಲ್ಲಿ ಶನಿವಾರ ನಡೆದ ಇನ್ನೊಂದು ಅಪಘಾತದಲ್ಲಿ ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ರಾಜಸ್ತಾನದ ಭರತ್ಪುರ ಜಿಲ್ಲೆಯ ಸೇವರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಸ್‌ ಮತ್ತು ಟ್ರಕ್‌ ಪರಸ್ಪರ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತರನ್ನು ಪ್ರತಾಪ್‌ ಸಿಂಗ್‌ (57) ಮತ್ತು ಹರ್ಭನ್‌ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ ಬಯಾನಾದಿಂದ ಭರತ್ಪುರಕ್ಕೆ ತೆರಳುತ್ತಿತ್ತು. ಇತ್ತ ಟ್ರಕ್‌ ಮಥುರಾದಿಂದ ಬರುತ್ತಿತ್ತು. ಸಾಸಿವೆ ಸಂಶೋಧನಾ ಕೇಂದ್ರದ ಬಳಿ ಈ ಅಪಘಾತ ಸಂಭವಿಸಿದೆ. ಇದಾದ ಬಳಿಕ ಟ್ರಕ್ ಮನೆಯೊಂದಕ್ಕೆ ನುಗ್ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ತಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ನಮ್ಮ ರಾಜ್ಯದ ಚಿತ್ರದುರ್ಗದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು.

ಇದನ್ನೂ ಓದಿ: Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

Exit mobile version