ನವದೆಹಲಿ: ಜನಪ್ರಿಯ ಫ್ಯಾಷನ್ ಡಿಸೈನರ್ (Fashion Designer) ರೋಹಿತ್ ಬಾಲ್ (Rohit Bal) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಗುರುಗ್ರಾಮದ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮೂಲಗಳು ತಿಳಿಸಿವೆ.
ಶ್ರೀನಗರ ಮೂಲದ ರೋಹಿತ್ 1986ರಲ್ಲಿ ಫ್ಯಾಷನ್ ಡಿಸೈನರ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ದೇಶದ ಜನಪ್ರಿಯ ಫ್ಯಾಷನ್ ಡಿಸೈನರ್‌ಗಳ ಪೈಕಿ ಒಬ್ಬರೆನಿಸಿಕೊಂಡರು. 62ರ ಹರೆಯದ ರೋಹಿತ್ ವಿಪರೀತ ಮದ್ಯ ಸೇವಿಸುತ್ತಿದ್ದುದೇ ಆರೋಗ್ಯ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಕ್ಷಣ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಿಂದೆಯೂ ರೋಹಿತ್ ಅವರಿಗೆ ಅನಾರೋಗ್ಯ ಕಾಡಿತ್ತು. 2010ರ ಫೆಬ್ರವರಿಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಆಗ ತುರ್ತು ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ರೋಹಿತ್ 2006ರಲ್ಲಿ ಇಂಡಿಯನ್ ಫ್ಯಾಷನ್ ಅವಾರ್ಡ್ಸ್ ಮತ್ತು 2001ರಲ್ಲಿ ಕಿಂಗ್ ಫಿಷರ್‌ನ ಫ್ಯಾಷನ್ ಅಚೀವ್‌ಮೆಂಟ್ ಪ್ರಶಸ್ತಿಗಳ ಪೈಕಿ ‘ಡಿಸೈನರ್ ಆಫ್ ದಿ ಇಯರ್’ ಅವಾರ್ಡ್ ಪಡೆದುಕೊಂಡಿದ್ದರು. 2012ರಲ್ಲಿ ಅವರನ್ನು ಲ್ಯಾಕ್ಮೆ ಗ್ರ್ಯಾಂಡ್ ಫಿನಾಲೆ ಡಿಸೈನರ್‌ಗೆ ಹೆಸರಿಸಲಾಗಿತ್ತು. 2020ರಲ್ಲಿ ರಜನಿಗಂಧ ಪರ್ಲ್ಸ್ ಇಂಡಿಯಾ ಫ್ಯಾಷನ್ ಪ್ರಶಸ್ತಿಗಳ ತೀರ್ಪುಗಾರರು “ದೇಶದ ಐಕಾನಿಕ್ ಫ್ಯಾಷನ್ ಡಿಸೈನರ್” ಎಂದು ಗುರುತಿದ್ದರು.
“ರೋಹಿತ್ ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದಾರೆ. ವೈದ್ಯರು ಅವರ ದೇಹದಿಂದ ಆಲ್ಕೋಹಾಲ್ ಮತ್ತು ನಿದ್ರೆ ಮಾತ್ರೆಗಳನ್ನು ಹೊರಹಾಕಿದ್ದಾರೆʼʼ ಎಂದು ರೋಹಿತ್ ಬಾಲ್ ಅವರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.
ಹಿನ್ನಲೆ
ಮೇ 8, 1961ರಂದು ಜನಿಸಿದ ರೋಹಿತ್ ಬಾಲ್ 1986ರಲ್ಲಿ ಸಹೋದರನೊಂದಿಗೆ ಆರ್ಕಿಡ್ ಓವರ್ಸೀ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1990ರಲ್ಲಿ ತಮ್ಮ ಸ್ವತಂತ್ರ ಬಟ್ಟೆಗಳ ಸಂಗ್ರಹವನ್ನು ಪ್ರಾರಂಭಿಸಿದರು. ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಅವರು ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ರೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿದ್ದರು.
ರೋಹಿತ್ ಬಾಲ್ ಅಂತಾರಾಷ್ಟ್ರೀಯ ಗ್ರಾಹಕರನ್ನು ಹೊಂದಿದ್ದಾರೆ. ಈ ಪೈಕಿ ಸಿಂಡಿ ಕ್ರಾಫೋರ್ಡ್, ಪಮೇಲಾ ಆಂಡರ್ಸನ್ ಮತ್ತು ಉಮಾ ಥುರ್ಮನ್ ಸೇರಿದಂತೆ ವಿವಿಧ ಭಾರತೀಯ ಸೆಲೆಬ್ರಿಟಿಗಳೂ ಸೇರಿದ್ದಾರೆ. ರೋಹಿತ್ ಬಾಲ್ ಒಮೆಗಾ ಗಡಿಯಾರಗಳ ರಾಯಭಾರಿಯೂ ಆಗಿದ್ದಾರೆ. ಅಲ್ಲದೆ ಭಾರತದ ಜನಪ್ರಿಯ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿಗಾಗಿ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದರು.
ಇದನ್ನೂ ಓದಿ: Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್
ಇತಿಹಾಸ, ಫ್ಯಾಂಟಸಿ ಮತ್ತು ಜಾನಪದವನ್ನು ಬಳಸಿಕೊಂಡು ರೋಹಿತ್ ಬಾಲ್ ವಿವಿಧ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಫ್ಯಾಷನ್ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರು ನಿರಂತರ ಅಧ್ಯಯನ ನಡೆಸುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ರೋಹಿತ್ ಬಾಲ್ ಬಟ್ಟೆ ಮಾತ್ರವಲ್ಲ ಆಭರಣ ವಿನ್ಯಾಸ ಪ್ರಪಂಚಕ್ಕೂ ಕಾಲಿಟ್ಟಿದ್ದರು. ಅವರು ಆಭರಣದಲ್ಲಿ ಕಮಲ ಮತ್ತು ನವಿಲಿನ ಆಕಾರಗಳ ಬಳಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಜತೆಗೆ ಆಗಾಗ್ಗೆ ವೆಲ್ವೆಟ್ ಮತ್ತು ಬ್ರೊಕೇಡ್‌ನಂತಹ ದುಬಾರಿ ಬಟ್ಟೆಗಳನ್ನೂ ಬಳಸುತ್ತಿದ್ದರು. ಅವರು ಲಂಡನ್, ಪ್ಯಾರಿಸ್, ನ್ಯೂಯಾರ್ಕ್, ಸಿಂಗಾಪುರ್, ಮಾಸ್ಕೋ, ಜಕಾರ್ತಾ, ಕೊಲಂಬೊ, ಸಾವೊ ಪಾಲೊ, ಮ್ಯೂನಿಚ್, ಜಿನೀವಾ ಮತ್ತು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಫ್ಯಾಷನ್ ಶೋಗಳನ್ನು ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ