ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಬಿಜೆಪಿಯ ೧೫ ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್ ಈಗ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. “ಆಪ್‌ನ ೧೦ ಕೌನ್ಸಿಲರ್‌ಗಳ ಖರೀದಿಗೆ ಬಿಜೆಪಿ ೧೦೦ ಕೋಟಿ ರೂಪಾಯಿಯ ಆಫರ್ (BJP Poaching AAP) ನೀಡಿದೆ” ಎಂದು ಆಪ್ ಕೌನ್ಸಿಲರ್‌ಗಳು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ.
“ಪಾಲಿಕೆ ಚುನಾವಣೆಯಲ್ಲಿ ಸೋತ ಬಿಜೆಪಿಯು ಹೊಲಸು ರಾಜಕಾರಣ ಮಾಡುತ್ತಿದೆ. ಹಣಬಲದಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆಪ್‌ನ ಒಬ್ಬ ಕೌನ್ಸಿಲರ್‌ಗೆ ೧೦ ಕೋಟಿ ರೂ. ಆಫರ್ ನೀಡಿದೆ. ಒಬ್ಬ ಕೌನ್ಸಿಲರ್‌ಗೆ ತಲಾ ೧೦ ಕೋಟಿ ರೂ. ನೀಡಿ, ಒಟ್ಟು ೧೦ ಕೌನ್ಸಿಲರ್‌ಗಳನ್ನು ಸೆಳೆಯುವ ತಂತ್ರ ಬಿಜೆಪಿಯದ್ದಾಗಿದೆ. ಹಾಗೆಯೇ, ಒಂದು ಕ್ರಾಸ್ ವೋಟಿಂಗ್‌ಗೆ ೫೦ ಲಕ್ಷ ರೂ. ಫಿಕ್ಸ್ ಮಾಡಿದೆ. ಆ ಮೂಲಕ ದೆಹಲಿ ಪಾಲಿಕೆಯಲ್ಲಿ ಆಪ್ ಆಡಳಿತ ನಡೆಸುವುದನ್ನು ತಡೆಯಲು ಬಿಜೆಪಿ ಎಲ್ಲ ಪ್ರಯತ್ನ ಮಾಡುತ್ತಿದೆ” ಎಂದು ಆಪ್ ಕೌನ್ಸಿಲರ್‌ಗಳಾದ ಡಾ.ರೊನಾಕ್ಷಿ ಶರ್ಮಾ, ಅರುಣ್ ನವಾರಿಯಾ ಹಾಗೂ ಜ್ಯೋತಿ ರಾಣಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಇದಕ್ಕೂ ಮೊದಲು, ಬಿಜೆಪಿ ಕೂಡ ಆಪ್ ವಿರುದ್ಧ ಇದೇ ಆರೋಪ ಮಾಡಿದೆ. ಬಿಜೆಪಿ ಕೌನ್ಸಿಲರ್‌ಗಳಿಗೆ ಆಪ್ ಆಮಿಷ ಒಡ್ಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮಹಾನಗರ ಪಾಲಿಕೆಯ ೨೫೦ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಪ್ ೧೩೪, ಬಿಜೆಪಿ ೧೦೪ ಹಾಗೂ ಕಾಂಗ್ರೆಸ್ ೯ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ | Delhi MCD Election| ದೆಹಲಿ ಮಹಾನಗರ ಪಾಲಿಕೆ ಆಪ್ ಮಡಿಲಿಗೆ; ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ