Site icon Vistara News

UCO Bank: ಯುಕೋ ಬ್ಯಾಂಕ್‌ನಲ್ಲಿ 820 ಕೋಟಿ ರೂ. ಹಗರಣ; 67 ಕಡೆ ಸಿಬಿಐ ರೇಡ್‌

UCO Bank

Rs 820 crore payments scam in UCO Bank: CBI raids in 7 cities

ನವದೆಹಲಿ: ಯುಕೋ ಬ್ಯಾಂಕ್‌ನಲ್ಲಿ (UCO Bank) ಸುಮಾರು 820 ಕೋಟಿ ರೂಪಾಯಿ ಹಗರಣ (Bank Scam) ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (CBI) ಎರಡು ರಾಜ್ಯಗಳ 7 ನಗರಗಳಲ್ಲಿ ಸುಮಾರು 67 ಕಡೆ ದಾಳಿ ನಡೆಸಿದೆ. ಮಹಾರಾಷ್ಟ್ರ ಹಾಗೂ ರಾಜಸ್ಥಾನದ 67 ಕಡೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ತೀವ್ರ ಗತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 30 ಶಂಕಾಸ್ಪದ ವ್ಯಕ್ತಿಗಳನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ಜೈಪುರ, ಜೋಧ್‌ಪುರ, ನಾಗೌರ್‌, ಜಲೋರ್‌, ಬರ್ಮೆರ್‌ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 120 ಸಿಬಿಐ ಅಧಿಕಾರಿಗಳು ತಲಾ 40 ಅಧಿಕಾರಿಗಳ ಮೂರು ತಂಡ ರಚಿಸಿ ದಾಳಿ ನಡೆಸಿದ್ದು, ಹಣ ಜಮೆಯಾದರೂ ಅದನ್ನು ಬ್ಯಾಂಕ್‌ಗೆ ಹಿಂತಿರುಗಿಸದೆ ಡ್ರಾ ಮಾಡಿದ ಗ್ರಾಹಕರ ನಿವಾಸಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿಬಿಐ ಅಧಿಕಾರಿಗಳಿಗೆ 330 ಪೊಲೀಸರು ಕೂಡ ನೆರವಾಗಿದ್ದಾರೆ.

ಕಳೆದ ವರ್ಷದ ನವೆಂಬರ್‌ 10ರಿಂದ 13ರ ಅವಧಿಯಲ್ಲಿ ಏಳು ಖಾಸಗಿ ಬ್ಯಾಂಕ್‌ಗಳ 14,600 ಖಾತೆಗಳಿಂದ ಯುಕೋ ಬ್ಯಾಂಕ್‌ ಗ್ರಾಹಕರ ಖಾತೆಗಳಿಗೆ ಸುಮಾರು 820 ಕೋಟಿ ರೂ. ಜಮೆಯಾಗಿದೆ. ಅನಾಮಧೇಯ ಖಾತೆಗಳಿಂದ ಕ್ಷಿಪ್ರ ಪಾವತಿ ವ್ಯವಸ್ಥೆ (IMPS) ಮೂಲಕ ಹಣ ವರ್ಗಾಯಿಸಲಾಗಿದೆ. ಈ ಕುರಿತು ಯುಕೋ ಬ್ಯಾಂಕ್‌ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿಬಿಐ ಅಧಿಕಾರಿಗಳ ದಾಳಿ ವೇಳೆ ಯುಕೋ ಹಾಗೂ ಐಡಿಎಫ್‌ಸಿ ಬ್ಯಾಂಕ್‌ಗಳ 130 ದಾಖಲೆಗಳು, 40 ಮೊಬೈಲ್‌, 2 ಹಾರ್ಡ್‌ ಡಿಸ್ಕ್‌ ಹಾಗೂ ಒಂದು ಇಂಟರ್‌ನೆಟ್‌ ಡಾಂಗಲ್‌ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sandeshkhali Violence: ಸಂದೇಶ್‌ಖಾಲಿ ಪ್ರಕರಣ ಆರೋಪಿ ಶಹಜಹಾನ್‌ ಕೊನೆಗೂ ಸಿಬಿಐ ಕೈಗೆ

ಪ್ರಕರಣದ ದಾಖಲಾಗುತ್ತಲೇ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೂಡ ಸಿಬಿಐ ಅಧಿಕಾರಿಗಳು ಕರ್ನಾಟಕದ ಮಂಗಳೂರು ಹಾಗೂ ಕೋಲ್ಕೊತಾದ 13 ಕಡೆ ದಾಳಿ ನಡೆಸಿದ್ದರು. ಖಾಸಗಿ ವ್ಯಕ್ತಿಗಳು ಹಾಗೂ ಯುಕೋ ಬ್ಯಾಂಕ್‌ ಅಧಿಕಾರಿಗಳ ಮನೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ದಾಳಿಯ ವೇಳೆ ಸುಮಾರು ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version