ನವ ದೆಹಲಿ: ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ.
ರುಚಿರಾ ಕಾಂಬೋಜ್ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದುವರೆಗೂ ಟಿ.ಎಸ್.ತಿರುಮೂರ್ತಿ ಅವರು ಈ ಕೆಲಸವನ್ನು ಮಾಡುತ್ತಿದ್ದರು.
ರುಚಿರಾ ಅವರು ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1987ರ ಬ್ಯಾಚ್‌ನಲ್ಲಿ ನೇಮಕಾತಿಗೊಂಡವರು. ಪ್ರಸ್ತುತ ಭೂತಾನ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭೂತಾನ್‌ಗೆ ಇವರು ಭಾರತದ ಪ್ರಪ್ರಥಮ ಮಹಿಳಾ ರಾಯಭಾರಿ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದಲ್ಲದೆ ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಕಚೇರಿಯಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಕೇಂದ್ರದ ಹಲವಾರು ಸಚಿವಾಲಯಗಳ ಕಾರ್ಯದರ್ಶಿ, ಉಪಕಾರ್ಯದರ್ಶಿಯಾಗಿ, ವಿಶ್ವಸಂಸ್ಥೆಯ ನಾನಾ ಅಂಗಗಳ ಸದಸ್ಯೆಯಾಗಿಯೂ ಕೆಲಸ ಮಾಡಿದ ಅನುಭವ ಇವರದು.
ಇದಲ್ಲದೆ 2014ರಿಂದೀಚೆಗೆ ಇವರು ಚೀಫ್ ಆಫ್ ಪ್ರೊಟೋಕಾಲ್ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಂತಾದ ಗಣ್ಯರು ವಿದೇಶಗಳಿಗೆ ಭೇಟಿ ನೀಡಿದರೆ ಅವರ ಕಾರ್ಯಕ್ರಮಗಳ ಪೂರ್ಣ ಹೊಣೆಯನ್ನು ಇವರು ಹೊರುತ್ತಾರೆ. ಹಲವಾರು ಲೇಖನಗಳನ್ನೂ ಮಾಧ್ಯಮಗಳಿಗೆ ಬರೆದಿದ್ದಾರೆ.
ಇದನ್ನೂ ಓದಿ: ಯಾರಿವರು ದ್ರೌಪದಿ ಮುರ್ಮು? ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ