Site icon Vistara News

Rules Change: ನಾಳೆಯಿಂದ ನಿಮ್ಮ ಜಿಮೇಲ್‌ ಅಕೌಂಟ್ ರದ್ದಾಗಬಹುದು ಎಚ್ಚರ!; ಮತ್ತೆ ಯಾವ ಸೇವೆಗಳಲ್ಲಿ ಬದಲಾವಣೆ?

changes

changes

ನವದೆಹಲಿ: ವರ್ಷದ ಕೊನೆಯ ಹಂತದಲ್ಲಿ ನಿಂತಿದ್ದೇವೆ. ನಾಳೆಯಿಂದ ಡಿಸೆಂಬರ್‌ ಆರಂಭ. ದೇಶಾದ್ಯಂತದ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ವಿವಿಧ ಬದಲಾವಣೆಗಳು ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಆರಂಭದಲ್ಲಿ ಜಾರಿಗೆ ಬರಲಿವೆ. ಬಳಸದ ಜಿಮೇಲ್‌ ಖಾತೆಗಳ ಡಿಲೀಟ್‌ ಆಗುವುದರಿಂದ ಹಿಡಿದು ಮಲೇಷ್ಯಾಕ್ಕೆ ವೀಸಾರಹಿತ ಪ್ರಯಾಣದವರೆಗೆ ವಿವಿಧ ಬದಲಾವಣೆಗಳಿಗೆ ಡಿಸೆಂಬರ್‌ ಸಾಕ್ಷಿಯಾಗಲಿದೆ. ಹಾಗಾದರೆ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿರುವ ದೊಡ್ಡ ಬದಲಾವಣೆಗಳು ಯಾವುವು ಎನ್ನುವ ವಿವರ ಇಲ್ಲಿದೆ (Rules Change).

ಸಾಲದ ನಿಯಮ

ಆರ್‌ಬಿಐ ಸಾಲಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಡಿಸೆಂಬರ್‌ 1ರಿಂದ ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ಬ್ಯಾಂಕ್‌ಗೆ ಸಾಲವನ್ನು ಮರು ಪಾವತಿ ಮಾಡಿದ 1 ತಿಂಗಳೊಳಗೆ ಸಾಲವನ್ನು ಪಡೆಯಲು ಬ್ಯಾಂಕ್‌ಗೆ ಸಲ್ಲಿಸಿದ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಬೇಕು. ತಪ್ಪಿದರೆ ಬ್ಯಾಂಕ್‌ಗೆ 5 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ರೂಲ್ಸ್‌

ದೇಶದ ಪ್ರಮುಖ ಬ್ಯಾಂಕ್‌ ಎಚ್‌ಡಿಎಫ್‌ಸಿ ತನ್ನ ರೆಗಾಲಿಯಾ ಕ್ರೆಡಿಟ್‌ ಕಾರ್ಡ್‌ ನಿಯಮದಲ್ಲಿ ಬದಲಾವಣೆ ತರಲಿದೆ. ಡಿಸೆಂಬರ್‌ 1ರಿಂದ ಬಳಕೆದಾರರು ಲಾಂಜ್‌ ಪ್ರವೇಶಕ್ಕಾಗಿ ವರ್ಷದ ತ್ರೈ ಮಾಸಿಕದಲ್ಲಿ 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಜನವರಿಯಿಂದ ಮಾರ್ಚ್‌, ಏಪ್ರಿಲ್‌ನಿಂದ ಜೂನ್‌, ಜುಲೈಯಿಂದ ಸೆಪ್ಟಂಬರ್‌, ಅಕ್ಟೋಬರ್‌ನಿಂದ ಡಿಸೆಂಬರ್‌ ತ್ರೈ ಮಾಸಿಕದಲ್ಲಿ 1 ಲಕ್ಷ ರೂ.ವರೆಗೆ ಖರ್ಚು ಮಾಡುವುದು ಅಗತ್ಯ. ಗ್ರಾಹಕರು ತ್ರೈ ಮಾಸಿಕದಲ್ಲಿ 2 ಬಾರಿ ಮಾತ್ರ ಲಾಂಚ್‌ ಪ್ರವೇಶದ ಲಾಭ ಪಡೆಯಬಹುದು. ಇದಕ್ಕಾಗಿ 2 ರೂ. ವಹಿವಾಟು ಶುಲ್ಕ ವಿಧಿಸಲಾಗುತ್ತದೆ.

ಬ್ಯಾಂಕ್‌ ಲಾಕರ್‌ ಸಮಯ ಮಿತಿ

ಪರಿಷ್ಕೃತ ಲಾಕರ್‌ ಒಪ್ಪಂದವನ್ನು ಡಿಸೆಂಬರ್‌ 31ರೊಳಗೆ ಜಾರಿಗೆ ತರಬೇಕು ಎಂದು ಆರ್‌ಬಿಐ ಹೇಳಿದೆ. 2022ರ ಡಿಸೆಂಬರ್‌ 31ರೊಳಗೆ ಬದಲಾದ ಬ್ಯಾಂಕ್‌ ಲಾಕರ್‌ ಒಪ್ಪಂದವನ್ನು ಸಲ್ಲಿಸಿದವರು ನವೀಕರಿಸಿದ ಒಪ್ಪಂದಕ್ಕೆ ಮತ್ತೊಮ್ಮೆ ಸಹಿ ಮಾಡಿ ಸಲ್ಲಿಸಬೇಕಾಗುತ್ತದೆ.

ಸಿಮ್‌ ಕಾರ್ಡ್‌ ಖರೀದಿ ನಿಯಮ

ಸೈಬರ್ ವಂಚನೆಯನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಸಿಮ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿದ್ದು, ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಸಿಮ್ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಳೆದ ಆಗಸ್ಟ್‌ ತಿಂಗಳಲ್ಲಿಯೇ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯು ಘೋಷಣೆ ಮಾಡಿತ್ತು. ವಂಚನೆಯ ಮೂಲಕ ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ನಿಧಾರ್ವನ್ನು ಕೈಗೊಂಡಿದೆ. ಈ ಹೊಸ ನಿಯಮಗಳಡಿಯಲ್ಲಿ, ಸಿಮ್ ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಕಡ್ಡಾಯವಾಗಿ ದೃಢೀಕರಣ ವ್ಯವಸ್ಥೆಗೆ ಒಳಪಡಬೇಕಾಗುತ್ತದೆ. ಒಂದು ವೇಳೆ, ಈ ನಿಮಯವನ್ನು ಪಾಲಿಸಲು ವಿಫಲರಾದರೆ ಸುಮಾರು 10 ಲಕ್ಷ ರೂ.ವರೆಗೂ ದಂಡವನ್ನು ತೆರಬೇಕಾಗುತ್ತದೆ. ಹೊಸ ಸಿಮ್‌ಗಳನ್ನು ಖರೀದಿಸುವ ಸಂದರ್ಭದಲ್ಲಿ ಅಥವಾ ಅಸ್ತಿತ್ವದಲ್ಲಿರುವ ಸಂಖ್ಯೆಯಲ್ಲಿ ಹೊಸದಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಕೆವೈಸಿ ಅಡಿಯಲ್ಲಿ ಗ್ರಾಹಕರು ಅಗತ್ಯ ಜನಸಂಖ್ಯಾ ವಿವರಗಳನ್ನು ಒದಗಿಸಬೇಕಾಗುತ್ತದೆ.

ಜಿಮೇಲ್‌ ಖಾತೆ ರದ್ದು

ಸುಮಾರು 2 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಕೆಯಲ್ಲಿ ಇಲ್ಲದ ಜಿಮೇಲ್‌ ಖಾತೆಗಳನ್ನು ಗೂಗಲ್‌ ಡಿಲೀಟ್‌ ಮಾಡಲಿದೆ. ಗೂಗಲ್‌ ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಮೇಯಲ್ಲಿ ಅಪ್‌ಡೇಟ್‌ ಮಾಡಿದೆ. ಅದರ ಭಾಗವಾಗಿ ಬಳಕೆಯಲ್ಲಿಲ್ಲದ ಜಿಮೇಲ್‌ ಅಕೌಂಟ್‌ಗಳನ್ನು ನಿಷ್ಕ್ರೀಯಗೊಳಿಸಲಿದೆ. ಡಿಸೆಂಬರ್‌ 1ರಿಂದಲೇ ಈ ಕ್ರಮ ಜಾರಿಗೆ ಬರಲಿದೆ.

ಮಲೇಷ್ಯಾಕ್ಕೆ ವೀಸಾರಹಿತ ಪ್ರಯಾಣ

ಭಾರತೀಯರು ಮತ್ತು ಚೀನಾದ ಪ್ರಜೆಗಳಿಗೆ 30 ದಿನಗಳ ಕಾಲ ದೇಶದಲ್ಲಿ ವೀಸಾ ಮುಕ್ತ ವಾಸ್ತವ್ಯಕ್ಕೆ ಅವಕಾಶ ನೀಡಲಾಗುವುದು ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಘೋಷಿಸಿದ್ದಾರೆ. ಈ ಕ್ರಮವು ಮಲೇಷ್ಯಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಜಿ 20 ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ

ಡಿಸೆಂಬರ್ 1ರಿಂದ ಬ್ರೆಜಿಲ್ ಜಿ-20 ರಾಷ್ಟ್ರಗಳ ಗುಂಪನ್ನು ಮುನ್ನಡೆಸಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. 2024ರಲ್ಲಿ ಬ್ರೆಜಿಲ್ ಹಾಗೂ 2025ರಲ್ಲಿ ದಕ್ಷಿಣ ಆಫ್ರಿಕಾ ಜಿ-20ಗೆ ಆತಿಥ್ಯ ವಹಿಸಲಿವೆ.

ಇದನ್ನೂ ಓದಿ: Tata Tech: ‘ಟಾಟಾ’ ಐಪಿಒ ಖರೀದಿಸಿದವರಿಗೆ ಧಮಾಕಾ; ಷೇರುಗಳ ಮೌಲ್ಯ ಡಬಲ್!

ಐಪಿಒ ಟೈಮ್‌ಲೈನ್‌ನಲ್ಲಿ ಬದಲಾವಣೆ

ಸೆಕ್ಯುರಿಟೀಸ್ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ಆರಂಭಿಕ ಸಾರ್ವಜನಿಕ ಕೊಡುಗೆಗಳ (ಐಪಿಒ) ಲಿಸ್ಟಿಂಗ್ ಅವಧಿಯನ್ನು ಹಿಂದಿನ T+6  ದಿನಗಳಿಂದ T+3  ದಿನಗಳಿಗೆ ಇಳಿಸಿದೆ. ಆರಂಭಿಕ ಸಾರ್ವಜನಿಕ ಕೊಡುಗೆಗಳು ಮುಚ್ಚಿದ ನಂತರ ಷೇರು ವಿನಿಮಯ ಕೇಂದ್ರಗಳಲ್ಲಿ ಷೇರುಗಳನ್ನು ಪಟ್ಟಿ ಮಾಡುವ ಹಿಂದಿನ ಆರು ದಿನಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ

ಡಿಸೆಂಬರ್‌ 1ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ನವೆಂಬರ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 100 ರೂ. ಹೆಚ್ಚಾಗಿತ್ತು. ಮದುವೆ ಋತು ಆರಂಭವಾಗಲಿರುವುದರಿಂದ ಎಲ್‌ಪಿಜಿ ಸಿಲಿಂಡರ್‌ ಬೆಲೆ ವೃದ್ಧಿಸುವ ನಿರೀಕ್ಷೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version