ಮಾಸ್ಕೊ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ 3 ಮಿಷನ್ (Chandrayaan 3) ಉಡಾವಣೆ ಮಾಡಿದ ಬೆನ್ನಲ್ಲೇ ರಷ್ಯಾ ಕೂಡ ಚಂದ್ರಯಾನ (Russia Moon Mission) ಕೈಗೊಂಡಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ (Roscosmos) ಲೂನಾ 25 ಲೂನಾರ್ ಮಿಷನ್‌ಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದ್ದು, ಈಗ ಯಾವ ದೇಶದ ನೌಕೆಯು ಮೊದಲು ಚಂದ್ರನ ಅಂಗಳಕ್ಕೆ ಲಗ್ಗೆ ಇಡಲಿದೆ ಎಂಬ ಕುತೂಹಲ ಮೂಡಿದೆ.
ರಷ್ಯಾದ ವೋಸ್ಟೊಕ್ನಿ ಕಾಸ್ಮೊಡ್ರೋಮ್‌ನಿಂದ (Vostochny Cosmodrome) ರಾಕೆಟ್ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಭಾರತದ ನೌಕೆಯು ಆಸ್ಟ್ 23 ಅಥವಾ ಆಗಸ್ಟ್ 24ರಂದು ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗುವ ಮೂಲಕ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿ ಗಳಿಸಲು ಮುಂದಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಲೂನಾ 25 ನೌಕೆಯನ್ನು ಚಂದ್ರನತ್ತ ಕಳುಹಿಸಿದೆ.
ರಷ್ಯಾದ ಲೂನಾ 25 ನೌಕೆಯು ಚಂದ್ರನಲ್ಲಿ ತೆರಳಲು 5 ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ದಕ್ಷಿಣ ಧ್ರುವದ ಸಂಭಾವ್ಯ ಮೂರು ಸ್ಥಳಗಳಲ್ಲಿ ಲ್ಯಾಂಡಿಂಗ್ ಆಗುವ ಮೂದಲು ಲೂನಾ 25 ಮೂರರಿಂದ 7 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಇರಲಿದೆ ಎಂದು ರಷ್ಯಾದಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಹಾಗಾಗಿ, ರಷ್ಯಾದ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲು ಒಟ್ಟು 12 ದಿನ ತೆಗೆದುಕೊಳ್ಳುವ ಅಂದಾಜಿದೆ. ಭಾರತದ ನೌಕೆ ಕೂಡ ಸಾಫ್ಟ್ ಲ್ಯಾಂಡಿಂಗ್ ಆಗಲು ಇಷ್ಟೇ ದಿನ ಬಾಕಿ ಇರುವ ಕಾರಣ ಮೊದಲು ಯಾವ ನೌಕೆ ಲ್ಯಾಂಡ್ ಆಗಲಿದೆ ಎಂಬ ಕುತೂಹಲ ಜಾಸ್ತಿಯಾಗಿದೆ.
ಇದನ್ನೂ ಓದಿ: Chandrayaan 3: ಚಂದಿರನಿಗೆ ಮತ್ತಷ್ಟು ಹತ್ತಿರ ಚಂದ್ರಯಾನ-3 ನೌಕೆ! ಕಕ್ಷೆ ಇಳಿಸುವ ಪ್ರಕ್ರಿಯೆ ಸಕ್ಸೆಸ್
ಘರ್ಷಣೆಯ ಅಪಾಯ ಇದೆಯೇ?
ಭಾರತದ ಚಂದ್ರಯಾನಕ್ಕೆ ಅಡ್ಡಿಯುಂಟು ಮಾಡುವುದಿಲ್ಲ ಎಂದು Roscosmos ಹೇಳಿದೆ. ಭಾರತ ಮತ್ತು ರಷ್ಯಾದ ಈ ನೌಕೆಗಳು ಪ್ರತ್ಯೇಕ ಲ್ಯಾಂಡಿಂಗ್ ಪ್ರದೇಶಗಳನ್ನು ಆಯ್ದುಕೊಂಡಿವೆ. ಅವು ಪರಸ್ಪರ ಹಸ್ತಕ್ಷೇಪ ಮಾಡುವ ಅಥವಾ ಘರ್ಷಣೆಯಾಗುವ ಯಾವುದೇ ಅಪಾಯವಿಲ್ಲ. ಚಂದ್ರನ ಮೇಲೆ ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶವಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ರಷ್ಯಾ 50 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡಿದೆ.