Site icon Vistara News

Russia-Ukraine War: ಕೆಲಸ ಕೊಡಿಸ್ತೇವೆ ಅಂತಾ ಸೇನೆಗೆ ತಳ್ಳಿದ್ರು..ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಭಾರತೀಯ ಯುವಕ ಸಾವು

Russia Ukraine War

ನವದೆಹಲಿ: ಭಾರತೀಯ ಯುವಕರನ್ನು ಬಲವಂತವಾಗಿ ರಷ್ಯಾ ಸೇನೆ(Russia Army)ಗೆ ಸೇರಿಸಿಕೊಳ್ಳುತ್ತಿರುವ ಪ್ರಕರಣ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಉಕ್ರೇನ್‌ ವಿರುದ್ಧದ ಯುದ್ಧ(Russia-Ukraine War)ದಲ್ಲಿ ಭಾರತೀಯ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಹರಿಯಾಣ ಮೂಲದ ರವಿ ಮೌನ್‌ ಎಂದು ಗುರುತಿಸಲಾಗಿದೆ.

ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಇನ್ನು ಈ ವಿಚಾರವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಅವರ ಸಹೋದರ ಅಜಯ್ ಮೌನ್ ಹೇಳಿದ್ದಾರೆ. ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದವರಾದ ರವಿಮೌನ್ ಜನವರಿ 13 ರಂದು ಡ್ರೈವರ್‌ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎನ್ನಲಾಗಿದೆ.

ಕೆಲಸ ಕೊಡಿಸೋದಾಗಿ ಏಜೆಂಟ್‌ ಒಂದು ನಂಬಿಸಿ ರವಿ ಅವರನ್ನು ರಷ್ಯಾಗೆ ಕಳುಹಿಸಿತ್ತು. ಆದರೆ ಅಲ್ಲಿ ಅವರನ್ನು ಬಲವಂತವಾಗಿ ಮಿಲಿಟರಿ ಹಾಕಲಾಯಿತು ಎಂದು ಅವರ ಸಹೋದರ ಹೇಳಿದ್ದಾರೆ. ಅಜಯ್ ಮೌನ್ ಜುಲೈ 21 ರಂದು ತನ್ನ ಸಹೋದರನ ಇರುವಿಕೆಯ ಮಾಹಿತಿಯನ್ನು ಕೋರಿ ರಾಯಭಾರ ಕಚೇರಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರವಾಗಿ ನಿಮ್ಮ ಸೋದರ ಸತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದು ಅವರು ಹೇಳಿದರು. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯ ವರದಿಯನ್ನು ಕಳುಹಿಸುವಂತೆ ರಾಯಭಾರ ಕಚೇರಿಯು ಕೇಳಿಕೊಂಡಿದೆ ಎಂದು ಕುಟುಂಬ ತಿಳಿಸಿದೆ.

ಕೆಲಸಕ್ಕೆಂದು ಹೋದವನು ಹೆಣವಾಗಿ ವಾಪಾಸ್‌

ರವಿ ಸಾವಿನಿಂದ ಅವರ ಕುಟುಂಬ ಸಂಪೂರ್ಣವಾಗಿ ಕಂಗಾಲಾಗಿದೆ. ಅಜಯ್‌ ಮೌನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರವಿ ಜನವರಿ 13 ರಂದು ರಷ್ಯಾಕ್ಕೆ ಹೋಗಿದ್ದರು. ಒಬ್ಬ ಏಜೆಂಟ್ ಅವರನ್ನು ಸಾರಿಗೆ ಕೆಲಸಕ್ಕಾಗಿ ರಷ್ಯಾಕ್ಕೆ ಕಳುಹಿಸಿದರು. ಆದರೆ, ಅವರನ್ನು ರಷ್ಯಾದ ಸೈನ್ಯಕ್ಕೆ ಸೇರಿಸಲಾಯಿತು. ಉಕ್ರೇನಿಯನ್ ಪಡೆಗಳ ವಿರುದ್ಧ ಹೋರಾಡಲು ಮುಂಚೂಣಿಗೆ ಹೋಗುವಂತೆ ರಷ್ಯಾದ ಸೈನ್ಯವು ತನ್ನ ಸಹೋದರನನ್ನು ಕೇಳಿದೆ. ಇಲ್ಲವಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಹೆದರಿಸಿದ್ದಾರೆ ಎಂದು ಅಜಯ್ ಮೌನ್ ಆರೋಪಿಸಿದರು. ನಾವು ಮಾರ್ಚ್ 12 ರವರೆಗೆ ಸೋದರನ ಜೊತೆ ಸಂಪರ್ಕದಲ್ಲಿದ್ದೆವು. ಆತ ಸಾಕಷ್ಟು ಬೇಸರದಲ್ಲಿದ್ದ ಎಂದು ಅಜಯ್ ಮೌನ್ ಹೇಳಿದ್ದಾರೆ.

ರಷ್ಯಾ ಮಿಲಿಟರಿಗೆ ಸೇರ್ಪಡೆಗೊಂಡ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವ ಭಾರತದ ಬೇಡಿಕೆಯನ್ನು ರಷ್ಯಾ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ ಎಂದಿದ್ದಾರೆ. ಇನ್ನು ರವಿ ಮೌನ್‌ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Exit mobile version