Site icon Vistara News

S Jaishankar: ಲಾವೋಸ್‌ನಲ್ಲಿ ತೊಂದರೆಗೆ ಸಿಲುಕಿದ್ದ 17 ಭಾರತೀಯರ ರಕ್ಷಣೆ; ಇದು ಮೋದಿಯ ಗ್ಯಾರಂಟಿ ಎಂದ ಸಚಿವ ಜೈಶಂಕರ್

S Jaishankar

S Jaishankar

ನವದೆಹಲಿ: ಕೆಲಸಕ್ಕೆಂದು ದಕ್ಷಿಣ ಏಷ್ಯಾ ರಾಷ್ಟ್ರ ಲಾವೋಸ್‌ (Laos)ಗೆ ಹೋಗಿ ತೊಂದರೆಗೆ ಸಿಲುಕಿದ್ದ 17 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ (Ministry of External Affairs) ಎಸ್.ಜೈಶಂಕರ್ (S Jaishankar) ಮಾಹಿತಿ ನೀಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಬರೆದುಕೊಂಡಿದ್ದಾರೆ.

ಕಾಂಬೋಡಿಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳ ಭರವಸೆ ನೀಡಿ ಮಾನವ ಕಳ್ಳಸಾಗಣೆ ನಡೆಸುವ ವಂಚಕರ ಬಲೆಗೆ ಬೀಳದಂತೆ ವಿದೇಶಾಂಗ ಸಚಿವಾಲಯ (MEA) ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಜೈಶಂಕರ್ ಹೇಳಿದ್ದೇನು?

ʼʼಮೋದಿ ಕಿ ಗ್ಯಾರಂಟಿ’ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತದೆ. ಲಾವೋಸ್‌ಗೆ ಕೆಲಸಕ್ಕೆಂದು ಹೋಗಿ ಸುರಕ್ಷಿತವಲ್ಲದ ಕೆಲಸಗಳಲ್ಲಿ ತೊಡಗಿಸಿದ್ದ ಹಾಗೂ ಕಾನೂನುಬಾಹಿರ ಕೆಲಸಕ್ಕೆ ಪ್ರೇರೇಪಿಸುವವರ ಜಾಲಕ್ಕೆ ಸಿಲುಕಿದ್ದ 17 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಇದು ಲಾವೋಸ್‌ನಲ್ಲಿನ ನಮ್ಮ ರಾಯಭಾರ ಕಚೇರಿ ಅಧಿಕಾರಿಗಳ ಪರಿಶ್ರಮಕ್ಕೆ ಹಿಡಿದ ಕನ್ನಡಿʼʼ ಎಂದು ಅವರು ಹೇಳಿದ್ದಾರೆ.

ನಕಲಿ ಉದ್ಯೋಗಾವಕಾಶಗಳ ಬಗ್ಗೆ ಎಚ್ಚರವಿರಲಿ

ಲಾವೋಸ್‌ನ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಕಾಲ್-ಸೆಂಟರ್ ಹಗರಣಗಳು ಮತ್ತು ಕ್ರಿಪ್ಟೋ ಕರೆನ್ಸಿ ವಂಚನೆಯಲ್ಲಿ ಭಾಗಿಯಾಗಿರುವ ಮೋಸಗಾರ ಸಂಸ್ಥೆಗಳಿಂದ ಥೈಲ್ಯಾಂಡ್ ಅಥವಾ ಲಾವೋಸ್‌ನಲ್ಲಿ ಉದ್ಯೋಗ ಒದಗಿಸುವುದಾಗಿ ಭಾರತೀಯ ಪ್ರಜೆಗಳನ್ನು ವಂಚಿಸಲಾಗುತ್ತಿದೆ. ವಿಶೇಷವಾಗಿ ‘ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್’ ಮುಂತಾದ ಕ್ಷೇತ್ರಗಳಲ್ಲಿ ವಂಚನೆ ಅಧಿಕ ಎಂದು ಮೂಲಗಳು ತಿಳಿಸಿವೆ.

ದುಬೈ, ಬ್ಯಾಂಕಾಕ್, ಸಿಂಗಾಪುರ್ ಮತ್ತು ಭಾರತದಲ್ಲಿನ ಏಜೆಂಟರು ಹೆಚ್ಚಿನ ಸಂಬಳ, ವಸತಿ ಮತ್ತು ವೀಸಾದ ಭರವಸೆಗಳೊಂದಿಗೆ ನಿರುದ್ಯೋಗಿಗಳ ಗಮನ ಸೆಳೆಯುತ್ತಾರೆ. ಬಳಿಕ ಅವರನ್ನು ಥೈಲ್ಯಾಂಡ್‌ನಿಂದ ಲಾವೋಸ್‌ಗೆ ಅಕ್ರಮವಾಗಿ ದಾಟಿಸುತ್ತಾರೆ ಮತ್ತು ಸರಿಯಾದ ಪರವಾನಗಿಗಳಿಲ್ಲದ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುತ್ತಾರೆ. ಹಲವು ಭಾರತೀಯರು ಇಂತಹ ಮಾನವ ಕಳ್ಳ ಸಾಗಣೆದಾರರಿಗೆ ಬಲಿಯಾಗಿದ್ದಾರೆ. ಅವರು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿರುವ ಅನೇಕ ಭಾರತೀಯರನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಎಂಇಎ ಹೊರಡಿಸಿದ ಮಾರ್ಗಸೂಚಿಯಲ್ಲಿ, ಆಗ್ನೇಯ ಏಷ್ಯಾದ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವ ಭಾರತೀಯರು ಉದ್ಯೋಗದಾತರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಕರೆ ನೀಡಿದೆ. “ಕಾಂಬೋಡಿಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳ ನಕಲಿ ಭರವಸೆಗಳಿಂದ ಆಕರ್ಷಿತರಾದ ಭಾರತೀಯ ಪ್ರಜೆಗಳು ಮಾನವ ಕಳ್ಳಸಾಗಣೆದಾರರ ಬಲೆಗೆ ಬೀಳುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ” ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: S Jaishankar: ಅಧಿಕಪ್ರಸಂಗಿ ಚೀನಾಗೆ ಭಾರತದ ತಪರಾಕಿ

ಕಳೆದ ವಾರ ಕೇಂದ್ರ ಸರ್ಕಾರ ಕಾಂಬೋಡಿಯಾ ಉದ್ಯೋಗದ ಆಮಿಷಕ್ಕೊಳಗಾಗಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಲಾಗುತ್ತಿದೆ ಎಂದು ತಿಳಿಸಿತ್ತು. ಮೂರು ತಿಂಗಳಲ್ಲಿ 75 ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸುಮಾರು 250 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ. ಸುಮಾರು 5 ಸಾವಿರಕ್ಕೂ ಅಧಿಕ ಭಾರತೀಯರು ಕಾಂಬೋಡಿಯಾದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version