Site icon Vistara News

ರಷ್ಯಾದಿಂದ ತೈಲ ಖರೀದಿ ಬಗ್ಗೆ ಅಮೆರಿಕದ ಪ್ರಶ್ನೆಗೆ ‘ಸ್ಮಾರ್ಟ್’‌ ಉತ್ತರ ಕೊಟ್ಟ ಜೈಶಂಕರ್; ಏನದು?

S Jaishankar

S Jaishankar's ‘smart' answer to question on India-Russia ties, Blinken smiles

ಮ್ಯುನಿಚ್: ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಬಳಿಕ ಜಗತ್ತಿನ ಹತ್ತಾರು ದೇಶಗಳು ನಿರ್ಬಂಧ ಹೇರಿದರೂ ರಷ್ಯಾದಿಂದ ಭಾರತವು ತೈಲ ಖರೀದಿ ಮಾಡಿಕೊಂಡ ಕುರಿತು ಅಮೆರಿಕ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ. ಜರ್ಮನಿಯ ಮ್ಯೂನಿಚ್‌ನಲ್ಲೂ ಕೂಡ ಅಮೆರಿಕವು ಭಾರತ ತೈಲ (India Russia Oil Trade) ಖರೀದಿಸಿದ್ದರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ (S Jaishankar) ಅವರು ‘ಸ್ಮಾರ್ಟ್’‌ ಉತ್ತರ ನೀಡಿದ್ದಾರೆ. ಅದರಲ್ಲೂ, ಅವರು ಅಮೆರಿಕ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಆ್ಯಂಟೋನಿ ಬ್ಲಿಂಕನ್‌ (Antony Blinken) ಎದುರೇ ಭಾರತದ ನಿಲುವನ್ನು ಖಚಿತವಾಗಿ ತಿಳಿಸಿದ್ದಾರೆ.

ಮ್ಯೂನಿಚ್‌ನಲ್ಲಿ ಎಸ್.ಜೈಶಂಕರ್‌ ಅವರು ಆ್ಯಂಟೋನಿ ಬ್ಲಿಂಕನ್‌ ಹಾಗೂ ಜರ್ಮನಿ ವಿದೇಶಾಂಗ ವ್ಯವಹಾರಗಳ ಸಚಿವೆ ಅನ್ನಾಲೆನಾ ಬೇರ್‌ಬಾಕ್‌ ಅವರೊಂದಿಗೆ ಸಂವಾದ ನಡೆಸುತ್ತಿದ್ದರು. ಆಗ, ಮಾಡರೇಟರ್‌ ಒಬ್ಬರು, “ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕವೂ ರಷ್ಯಾದಿಂದ ಭಾರತ ತೈಲ ಖರೀದಿಸಿತು. ಇದರ ಬಗ್ಗೆ ಏನು ಹೇಳುತ್ತೀರಿ” ಎಂದು ಉದ್ಧಟತನದ ಪ್ರಶ್ನೆ ಕೇಳಿದರು. ಆಗ ಎಸ್.ಜೈಶಂಕರ್‌ ಅವರು, “ಇದರಲ್ಲಿ ಅಂಥ ಮಹಾ ಪ್ರಮಾದವೇನಿದೆ” ಎಂದು ಕೇಳುವ ಮೂಲಕ ತಿರುಗೇಟು ನೀಡಿದರು.

“ರಷ್ಯಾದಿಂದ ಭಾರತ ತೈಲ ಖರೀದಿಸಿದರೆ, ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಅದು ಏಕೆ ಸಮಸ್ಯೆಯಾಗಬೇಕು? ಹಾಗೆ ನೋಡಿದರೆ, ನಾನು ನಿಮಗೆ ತುಂಬ ಸ್ಮಾರ್ಟ್‌ ಆದ ಹಲವು ಆಯ್ಕೆಗಳನ್ನು ನೀಡಿದರೆ, ಅದಕ್ಕೆ ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ನಾವು ತೈಲ ಖರೀದಿಸಿದರೆ ಬೇರೆಯವರಿಗೆ ಅದು ಹೇಗೆ ಸಮಸ್ಯೆಯಾಗುತ್ತದೆ? ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಯಾವುದೇ ದೇಶದ ಜತೆ ಉತ್ತಮ ಸಂಬಂಧ ಹೊಂದುವುದು ಕಷ್ಟ. ಆದರೆ, ಅದನ್ನು ನಾವು ಸಾಧಿಸಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ​ಗೆ ವಿರಾಟ್​ ಕೊಹ್ಲಿ ಸಹಿಯುಳ್ಳ ಬ್ಯಾಟ್​ ಗಿಫ್ಟ್​ ನೀಡಿದ ಜೈಶಂಕರ್‌

“ನಾವು ಜನರೊಂದಿಗೆ, ದೇಶಗಳೊಂದಿಗೆ ಬೆರೆಯುತ್ತೇವೆ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ಜಗತ್ತಿನಾದ್ಯಂತ ಹತ್ತಾರು ಘಟನೆಗಳು ನಡೆಯುತ್ತಿರುತ್ತವೆ. ಬೆಳವಣಿಗೆಗಳಂತೂ ನಡೆಯುತ್ತಲೇ ಇರುತ್ತವೆ. ಬೇರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾಗ ಹತ್ತಾರು ಆಯ್ಕೆಗಳು ಇರುತ್ತವೆ. ಚಾಣಾಕ್ಷ ಸಹಭಾಗಿಗಳು ಉತ್ತಮ ಆಯ್ಕೆಗಳ ಮೂಲಕ ಮುಂದುವರಿಯುತ್ತಾರೆ” ಎಂದು ಹೇಳುವ ಮೂಲಕ, ಭಾರತವು ರಷ್ಯಾದಿಂದ ತೈಲ ಖರೀದಿಸಿದ್ದು ಉತ್ತಮ ಸಂಬಂಧದ ಮೂಲಕ ಎಂಬುದನ್ನು ಸ್ಪಷ್ಟಪಡಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version