ತಿರುವನಂತಪುರಂ: ಹರಿಹರಪುತ್ರ ಅಯ್ಯಪ್ಪ ದೇವರ ನೆಲೆಯಾದ ಶಬರಿಮಲೆಯಲ್ಲಿ (Sabarimala) ಮೂಲಸೌಕರ್ಯಗಳು ಅವ್ಯವಸ್ಥೆಯಾಗಿದ್ದು, ಭಕ್ತರು ಈ ಬಾರಿ ತೀವ್ರ ಸಮಸ್ಯೆ, ಕಿರಿಕಿರಿ ಅನುಭವಿಸಿದ್ದಾರೆ. ಹಿಂದೆಂದೂ ಇಲ್ಲದಷ್ಟು ಜನಸಂದಣಿ ಈ ವರ್ಷ ಕಂಡುಬಂದಿದ್ದು, ನೂಕುನುಗ್ಗಲಿನಲ್ಲಿ ದರ್ಶನವೇ ಸಾಧ್ಯವಾಗಲಿಲ್ಲ ಎಂದು ಸಾವಿರಾರು ಭಕ್ತರು ದೂರಿದ್ದಾರೆ.
ಶಬರಿಮಲೆ ದೇಗುಲದಲ್ಲಿ (Shabarimale Temple) ಈ ವರ್ಷ ಉಂಟಾದ ಗೊಂದಲ, ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಮುಂತಾದ ಸ್ಥಳಗಳಿಂದ ಬಂದ ಸಾವಿರಾರು ಯಾತ್ರಾರ್ಥಿಗಳು ಈ ಭಾರಿ ದಟ್ಟಣೆಯನ್ನು ನೋಡಿ, ತಮ್ಮ ದೇಗುಲದ ಪ್ರವಾಸವನ್ನು ಅಲ್ಲಿಗೇ ಮೊಟಕುಗೊಳಿಸಿ ಹಿಂದಿರುಗಿದರು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಸುಮಾರು ಹತ್ತು ಕಿಲೋಮೀಟರ್ಗಳಷ್ಟುದ್ದದ ವಾಹನಗಳ ಹಾಗೂ ಜನರ ಕ್ಯೂ ಕಂಡುಬಂತು. ಊಟ, ತಿಂಡಿ, ಶೌಚಕ್ಕೆ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುತ್ತಿರುವುದು ಕಂಡುಬಂದಿದೆ. ಆರೋಗ್ಯ ಕೆಟ್ಟರೆ ತಕ್ಷಣದ ವೈದ್ಯಕೀಯ ಸೇವೆಯ ವ್ಯವಸ್ಥೆಯೂ ಶಬರಿಮಲೆಯಲ್ಲಿ ಕಂಡುಬಂದಿಲ್ಲ.
ಪೊಲೀಸರು ಅರ್ಧ ದಾರಿಯಲ್ಲೇ ವಾಹನಗಳನ್ನು ತಡೆದರು. ಪ್ರವಾಸಿಗರು ಗಂಟೆಗಳ ಕಾಲ ಕಾಯುವಂತಾಯಿತು. ಇದರಿಂದ ರೊಚ್ಚಿಗೆದ್ದ ಶಬರಿಮಲೆ ಯಾತ್ರಾರ್ಥಿಗಳು ಮಂಗಳವಾರ ಎರುಮೇಲಿಯಲ್ಲಿ ರಸ್ತೆ ತಡೆ ನಡೆಸಿ ಪಂಪಾಕ್ಕೆ ಅನುಮತಿ ನೀಡದಿರುವ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿದರು ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.
ವಿವಿಧ ರಾಜ್ಯಗಳ ಭಕ್ತರು ಎರುಮೇಲಿ- ರಣ್ಣಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರಮುಖ ಯಾತ್ರಾ ಕೇಂದ್ರವಾದ ಎಟ್ಟುಮನೂರು ಮಹಾದೇವ ದೇವಸ್ಥಾನದಲ್ಲಿ ಮುಂಜಾನೆ ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಗಂಟೆಗಟ್ಟಲೆ ಕಾದರೂ ಯಾತ್ರಾರ್ಥಿಗಳನ್ನು ಶಬರಿಮಲೆಗೆ ತೆರಳದಂತೆ ತಡೆಯಲಾಗಿದೆ ಎಂದು ವರದಿ ತಿಳಿಸಿದೆ. ಎರುಮೇಲಿ ಮತ್ತು ಪಂಪಾದಲ್ಲಿ ಜನಜಂಗುಳಿ ಇದ್ದ ಕಾರಣ ಹಿಂದಿನ ದಿನ ಬೆಳಗ್ಗೆ ಎಟ್ಟುಮನೂರು ದೇವಸ್ಥಾನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಶಬರಿಮಲೆಗೆ ತೆರಳಲು ಅವಕಾಶ ನೀಡಲಿಲ್ಲ.
“ದಶಕಗಳ ಹಿಂದೆ ನಾನು ಮಗುವಾಗಿದ್ದಾಗ ನನ್ನ ತಂದೆಯೊಂದಿಗೆ ಶಬರಿಮಲೆಗೆ ಬಂದಿದ್ದೆ. ಇನ್ನೂ ನಾನು ಆಗಿನ ಸುಂದರವಾದ ಮಾರ್ಗವನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ವಯಸ್ಸಾದ ನಂತರ ನನ್ನ ಕುಟುಂಬದೊಂದಿಗೆ ಬೆಟ್ಟದ ದೇಗುಲಕ್ಕೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಶಬರಿಮಲೆಗೆ ತೆರಳುವ ಟ್ರೆಕ್ಕಿಂಗ್ ಮಾರ್ಗದ ಇಂದಿನ ಸ್ಥಿತಿಗತಿ ಕಂಡು ಗಾಬರಿಯಾಗಿದೆ. ದುರದೃಷ್ಟವಶಾತ್ ಇಂದು (ಮಂಗಳವಾರ) ನಿಲಕ್ಕಲ್ನಲ್ಲಿ ನಮ್ಮ ಪ್ರಯಾಣವನ್ನು ಮೊಟಕುಗೊಳಿಸಬೇಕಾಯಿತು. ನಿಲಕ್ಕಲ್ನ ಪರಿಸ್ಥಿತಿ ನಮ್ಮಲ್ಲಿ ಭಯ ಹುಟ್ಟಿಸಿತು. ನಾವು ಈಗ ಪಂದಳಂನಿಂದ ಹಿಂತಿರುಗುತ್ತಿದ್ದೇವೆ” ಎಂದು ತ್ರಿಶೂರ್ನ ಅರಿಮ್ಪುರದ 60 ವರ್ಷದ ಭಕ್ತೆಯಾದ ಓಮನಾ ಹೇಳಿದರು.
ಪೊಲೀಸರು ವಾಹನಗಳನ್ನು ತಡೆದಿದ್ದರಿಂದ ಭಕ್ತರು ಎರುಮೇಲಿಯಿಂದ ನಿಲಕ್ಕಲ್ಗೆ ತಲುಪಲು ಎಂಟು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು. ಎಲ್ಲ ಬಸ್ಗಳು ಪಂಪಾಕ್ಕೆ ಹೋಗಲು ಸಾಧ್ಯವಾಗಲಿಲ್ಲ. “ಮಕ್ಕಳು ಮತ್ತು ವೃದ್ಧರ ಸುರಕ್ಷತೆ ಕಷ್ಟವಾಗಿತ್ತು. ಹಾಗಾಗಿ ನಾವು ನಿಲಕ್ಕಲ್ನಲ್ಲಿ ನಮ್ಮ ಯಾತ್ರೆಯನ್ನು ಮುಗಿಸಿ ಬೆಳಿಗ್ಗೆ 6 ಗಂಟೆಗೆ ಹಿಂತಿರುಗಿದೆವು. ಪಂದಳಂ ದೇವಸ್ಥಾನವನ್ನು ತಲುಪಿ ವಿಧಿವಿಧಾನಗಳನ್ನು ಪೂರೈಸಿದೆವು” ಎಂದು ತ್ರಿಶೂರ್ನ ಪುರನಾಟ್ಟುಕರ ಯಾತ್ರಿ ಅಶೋಕ್ ಕುಮಾರ್ ಹೇಳಿದ್ದಾರೆ.
ದೇಗುಲಕ್ಕೆ ಆಗಮಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲ, ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಕೇರಳ ಹೈಕೋರ್ಟ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದೆ. ನ್ಯಾಯಮೂರ್ತಿ ಅನಿಲ್ ನರೇಂದ್ರನ್ ಮತ್ತು ಜಿ. ಗಿರೀಶ್ ಅವರ ಪೀಠ, ಶಬರಿಮಲೆ ದೇಗುಲದ ನೂಕು ನುಗ್ಗಲು ನಿಯಂತ್ರಿಸಲು ರಾಜ್ಯ ಪೊಲೀಸರಿಗೆ ಆದೇಶಿಸಿದೆ.
“ಶಿಕ್ಷಣ ಸಂಸ್ಥೆಗಳ ಎನ್ಎಸ್ಎಸ್ ಸ್ವಯಂಸೇವಕರ ಮೂಲಕ ಅಥವಾ ಸಂಬಂಧಪಟ್ಟ ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ಯಾತ್ರಾರ್ಥಿಗಳಿಗೆ ಕುಡಿಯುವ ನೀರು ಮತ್ತು ಬಿಸ್ಕೆಟ್ಗಳನ್ನು ಒದಗಿಸಬಹುದೇ ಎಂದು ಪರಿಗಣಿಸಿ” ಎಂದು ನ್ಯಾಯಾಲಯ ಸೂಚಿಸಿದೆ. ವಾಹನಗಳ ಗರಿಷ್ಠ ನಿಲುಗಡೆ ಖಚಿತಪಡಿಸಿಕೊಳ್ಳಲು ದೇವಸ್ವಂ ಮಂಡಳಿಯು ಪ್ರತಿ ಪಾರ್ಕಿಂಗ್ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿ/ನೌಕರರನ್ನು ನಿಯೋಜಿಸಬೇಕು. ಮಕ್ಕಳು ಸೇರಿದಂತೆ ಯಾತ್ರಾರ್ಥಿಗಳಿಗೆ ದೇಗುಲದಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂಆರ್ ಅಜಿತ್ ಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಯಾಕೆ ಶಬರಿಮಲೆ ದೇವಸ್ಥಾನದಲ್ಲಿ ರಶ್?
ಡಿಸೆಂಬರ್ 8ರಂದು ಬೆಳಿಗ್ಗೆ ಪ್ರಾರಂಭವಾದ ಟ್ರಾಫಿಕ್ ಜಾಮ್ ಹಾಗೂ ನೂಕುನುಗ್ಗಲು ನಾಲ್ಕು ದಿನಗಳ ಕಾಲ ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ಮುಂದುವರಿಯಿತು. ಯಾತ್ರೆಯ ಮೊದಲ ಎರಡು ವಾರಗಳಲ್ಲಿ ಯಾತ್ರಾರ್ಥಿಗಳ ದೈನಂದಿನ ಸರಾಸರಿ ಅರ್ಧ ಲಕ್ಷ. ಡಿಸೆಂಬರ್ 7ರ ನಂತರ ಹೆಚ್ಚಿನ ಭಕ್ತರ ಹರಿವು ಪ್ರಾರಂಭವಾಯಿತು. ಇದಕ್ಕೆ ಹಲವು ಕಾರಣ ಊಹಿಸಲಾಗಿದೆ.
ಚೆನ್ನೈನಲ್ಲಿ ಪ್ರವಾಹ ಉಂಟಾದಾಗ ಕೇರಳಕ್ಕೆ ತೆರಳುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಆಗ ಬಾಕಿಯಾದವರು ಈಗ ಬರುತ್ತಿದ್ದಾರೆ. ನೆರೆಯ ರಾಜ್ಯ ತೆಲಂಗಾಣದಲ್ಲಿ ಚುನಾವಣೆ ಮುಗಿಸಿದ ನಂತರ ಅಲ್ಲಿಂದ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪೊಲೀಸರು ಹಾಗೂ ಭದ್ರತಾ ವ್ಯವಸ್ಥೆಯಲ್ಲಿಯೂ ತುಸು ಲೋಪವಾಗಿದ್ದು, ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ.
ಇದನ್ನೂ ಓದಿ: Sabarimala: ₹310 ಕೋಟಿ ಆದಾಯ ಇದ್ದರೂ ಶಬರಿಮಲೆಯಲ್ಲಿ ಅವ್ಯವಸ್ಥೆ! ಶುಚಿತ್ವಕ್ಕೆ ಹೈಕೋರ್ಟ್ ಆದೇಶ