ನವದೆಹಲಿ: ಭಾರತದಲ್ಲಿರುವ ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ (Pakistan) ಮಹಿಳೆಯೊಬ್ಬಳು (Pak Woman) ಗಡಿ ದಾಟಿ ಭಾರತಕ್ಕೆ ಆಗಮಿಸಿದ ಪ್ರಕರಣವು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮೂರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ (Seema Haider) ಜತೆಗೆ ಪ್ರಿಯಕರ ಸಚಿನ್ ಮೀನಾ (Sachin Meena) ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ (Nepal) ಒಂದು ವಾರ ಕಾಲ ತಮ್ಮ ಹೊಟೇಲ್‌ನಲ್ಲಿ ಹೆಸರು ಬದಲಿಸಿಕೊಂಡು ವಾಸ್ತವ್ಯ ಹೂಡಿದ್ದರು ಎಂದು ನೇಪಾಳದ ಹೊಟೇಲ್ ಮಾಲೀಕರೊಬ್ಬರು ಹೇಳಿಕೊಂಡಿದ್ದಾರೆ.
ಅವರು (ಸೀಮಾ ಮತ್ತು ಸಚಿನ್) ಮಾರ್ಚ್ ತಿಂಗಳಲ್ಲಿ ಇಲ್ಲಿಗೆ ಬಂದಿದ್ದರು ಮತ್ತು ಏಳೆಂಟು ದಿನಗಳ ಕಾಲ ವಾಸವಾಗಿದ್ದರು. ಬಹುತೇಕ ಸಮಯ ಅವರು ಕೋಣೆಯೊಳಗೇ ಇರುತ್ತಿದ್ದರು. ಸಂಜೆ ಹೊರಗೆ ಹೋಗುತ್ತಿದ್ದರು. ಹೊಟೇಲ್ 9.30ಕ್ಕೆ ಕ್ಲೋಸ್ ಆಗುತ್ತಿದ್ದರಿಂದ ಬೇಗನೆ ಬಂದು ಸೇರುತ್ತಿದ್ದರು ಎಂದು ನೇಪಾಳದ ಕಾಠ್ಮಂಡುವಿನಲ್ಲಿರುವ ಹೊಟೇಲ್ ಓನರ್ ಗಣೇಶ್ ತಿಳಿಸಿದ್ದಾರೆ.
ಮೊದಲಿಗೆ ಸಚಿನ್ ಬಂದಿದ್ದ ಮತ್ತು ಹೊಟೇಲ್ ರೂಮ್ ಬುಕ್ ಮಾಡಿದ್ದ. ಮಾರನೇ ದಿನ ತನ್ನ ಹೆಂಡತಿ ಬರುವುದಾಗಿ ಆತ ನಮಗೆ ಹೇಳಿದ್ದ. ಆತ ಹೇಳಿದಂತೆ ಸೀಮಾ ಮಾರನೇ ದಿನ ಬಂದರು. ಹೊಟೇಲ್ ಬಿಡುವಾಗ ಸೀಮಾ ಮೊದಲಿಗೆ ಹೋದಳು. ಆಕೆ ಹೋದ ಮಾರನೇ ದಿನ ಸಚಿನ್ ಹೊರಟು ಹೋದ. ಅವರಿಬ್ಬರೇ ಬಂದಿದ್ದರು. ಅವರೊಂದಿಗೆ ಯಾವುದೇ ಮಕ್ಕಳು ಇರಲಿಲ್ಲ. ಸಚಿನ್ ತನ್ನ ಹೆಸರನ್ನು ಶಿನಾನ್ಶ ಎಂದು ಬರೆಯಿಸಿದ್ದ. ಭಾರತೀಯ ಕರೆನ್ಸಿಯಲ್ಲೇ ತಮ್ಮ ಬಿಲ್ ಪಾವತಿಸಿದ್ದರು ಎಂದು ಓನರ್ ಗಣೇಶ್ ತಿಳಿಸಿದ್ದಾರೆ.
ಕಾಠ್ಮಂಡುವಿನಲ್ಲಿರುವ ನ್ಯೂ ವಿನಾಯಕ ಹೊಟೇಲ್‌ಲ್ಲಿ ಸಚಿನ್ ಮೀನಾ ರೂಮ್ ಬುಕ್ ಮಾಡಿದ್ದ. ಮಾರ್ಚ್ 10ರಂದು ಆತ ಗೋರಖಪುರ ಮೂಲಕ ಅಲ್ಲಿ ತೆರಳಿದ್ದ. ಆತ ಸೀಮಾಳನ್ನು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದ. ಆಕೆ ಶಾರ್ಜಾ ಮೂಲಕ ನೇಪಾಳದ ಕಾಠ್ಮಂಡುಗೆ ಬಂದಿದ್ದಳು. ಇವರಿಬ್ಬರು ನೇಪಾಳದಲ್ಲಿ ಒಂದು ವಾರ ಕಾಲ ವಾಸವಾಗಿದ್ದರು ಎಂದು ಉತ್ತರ ಪ್ರದೇಶ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?
ಸೀಮಾ 2022ರಲ್ಲಿ ತನ್ನ ಪ್ರಿಯಕರನೊಂದಿಗೆ ಇರಲು ಪಾಕಿಸ್ತಾನವನ್ನು ತೊರೆಯಲು ಯೋಜಿಸಿದ್ದಳು ಎಂದು ಯುಪಿ ಪೊಲೀಸರು ಹೇಳಿದ್ದಾರೆ. ಆದರೆ ಅವಳು ತನ್ನ ಮನೆಯನ್ನು ಖರೀದಿಸಿದ ಮೂರು ತಿಂಗಳ ನಂತರ 12 ಲಕ್ಷ ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಳು. ನೇಪಾಳದ ಹೊಟೇಲ್‌ನಲ್ಲಿ ಮೀನಾ ಜತೆ ಒಂದು ವಾರ ಕಾಲ ಕಳೆದ ಬಳಿಕ, ಟೂರಿಸ್ಟ್ ವೀಸಾ ಮೂಲಕ ದುಬೈಗೆ ಹೋಗಿ ಅಲ್ಲಿಂದ ಮತ್ತೆ ಕಾಠ್ಮಂಡು ಬಂದು, ಅಲ್ಲಿಂದ ಉತ್ತರ ಪ್ರದೇಶ ಸಿದ್ಧಾರ್ಥನಗರಕ್ಕೆ ಖುನ್ವಾ ಗಡಿ ಮೂಲಕ ಒಳ ನುಸುಳಿದ್ದಳು. ಆ ಬಳಿಕ ಆಕೆ ಲಕ್ನೋ ಮತ್ತು ಆಗ್ರಾ ಮಾರ್ಗ ಮೂಲಕ ಗೌತಮ್ ಬುದ್ಧ ನಗರ ತಲುಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.