Site icon Vistara News

Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

Salman Khan

Salman Khan

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈಯ ಬಾಂದ್ರಾದ ನಿವಾಸದೆದುರು ಇಂದು (ಏಪ್ರಿಲ್‌ 14) ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಇಬ್ಬರು ಶೂಟರ್‌ಗಳ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi)​ ದಾಳಿಯ ಹೊಣೆ ಹೊತ್ತುಕೊಂಡಿದ್ದ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ.

ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಕ್ಯಾಪ್‌ ಧರಿಸಿರುವುದು ಕಂಡು ಬಂದಿದೆ. ಆ ಪೈಕಿ ಓರ್ವ ಬಿಳಿ ಟೀ ಶರ್ಟ್‌, ಕಪ್ಪು ಜಾಕೆಟ್‌ ಮತ್ತು ಜೀನ್ಸ್‌ ಧರಿಸಿದ್ದರೆ, ಇನ್ನೋರ್ವ ಕೆಂಪು ಟೀ ಶರ್ಟ್‌ ಮತ್ತು ಜೀನ್ಸ್‌ ಧರಸಿದ್ದಾನೆ. ಬೈಕ್‌ನಲ್ಲಿ ಬಂದ ಇವರು ಸಲ್ಮಾನ್‌ ಮನೆ ಎದುರು ಶೂಟ್‌ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಟನ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಈ ದ್ವಿಚಕ್ರ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಗಾಗಿ ಶೋಧವನ್ನು ತೀವ್ರಗೊಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಜತೆ ನಂಟು ಹೊಂದಿದ್ದಾರೆಂದು ಶಂಕಿಸಲಾದ ಇಬ್ಬರು ವ್ಯಕ್ತಿಗಳು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್‌ ಖಾನ್‌ ಅವರೊಂದಿಗೆ ಮಾತನಾಡಿ ರಕ್ಷಣೆಯ ಭರವಸೆ ನೀಡಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಯಾರು ಈ ಅನ್ಮೋಲ್‌?

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಈ ಅನ್ಮೋಲ್‌ ಬಿಷ್ಣೋಯ್‌. ಸದ್ಯ ಈತ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಆತನ ಕೈವಾಡವಿತ್ತು ಎನ್ನಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ಬಳಿಕ ಅನ್ಮೋಲ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ವರ್ಷ ಆತನನ್ನು ಅಜರ್‌ಬೈಜಾನ್‌ನಲ್ಲಿ ಪತ್ತೆಯಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಅಮೆರಿಕದಲ್ಲಿ ಕಂಡುಬಂದಿದ್ದ. ಮದುವೆ ಸಮಾರಂಭಕ್ಕೆ ಆತ ತೆರಳಿದ್ದ ವಿಡಿಯೊ ವೈರಲ್‌ ಆಗಿತ್ತು. ಸಲ್ಮಾನ್‌ ಖಾನ್‌ ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹಿಂದೆಯೂ ಬೆದರಿಕೆ ಹಾಕಿದ್ದ. 

ಇದನ್ನೂ ಓದಿ: Salman Khan: ನಟ ಸಲ್ಮಾನ್​ ಖಾನ್ ಮನೆಯ ಹೊರಗೆ ಗುಂಡಿನ ದಾಳಿ; ಹೊಣೆ ಹೊತ್ತ ಗ್ಯಾಂಗ್​ಸ್ಟರ್​ ಸಹೋದರ

Exit mobile version