ಹೊಸದಿಲ್ಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ (supreme court) ಇಂದು ಮಹತ್ವದ ತೀರ್ಪು (same sex marriage verdict) ನೀಡಿದ್ದು, ಈ ಕುರಿತು ಕಾನೂನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದಿದೆ.
ಸುಪ್ರೀಂ ಕೋರ್ಟ್ ಈ ತೀರ್ಪಿನ (same sex marriage verdict) ವೇಳೆ ನೀಡಿರುವ ಹಲವು ಪ್ರಮುಖ ಅಭಿಪ್ರಾಯಗಳು ಸರ್ಕಾರಕ್ಕೆ ಸೂಚನೆಯಾಗುವಂತಿದ್ದು, ಈ ಕೆಳಗಿನಂತಿವೆ.
- ಕೋರ್ಟ್ ಕಾನೂನು ರಚಿಸಲಾರದು. ಅದು ಕಾನೂನನ್ನು ವ್ಯಾಖ್ಯಾನಿಸಬಹುದು, ಪರಿಣಾಮವನ್ನು ತರಬಹುದು.
- ವಿಶೇಷ ವಿವಾಹ ಕಾಯಿದೆಯಲ್ಲಿ ತಿದ್ದುಪಡಿಯ ಬಗ್ಗೆ ಸಂಸತ್ತು ನಿರ್ಧರಿಸಬೇಕು. ಶಾಸಕಾಂಗದ ಅಧಿಕಾರದಲ್ಲಿ ಕೋರ್ಟ್ ಮದ್ಯಪ್ರವೇಶಿಸುವುದಿಲ್ಲ.
- ಮದುವೆಯು ಸ್ಥಿರ ಮತ್ತು ಬದಲಾಗದ ವ್ಯವಸ್ಥೆ ಎಂದು ಹೇಳುವುದು ತಪ್ಪು.
- ಕ್ವಿಯರ್ ಎಂಬುದು ಯುಗಯುಗಾಂತರಗಳಿಂದ ಇರುವ ನೈಸರ್ಗಿಕ ವಿದ್ಯಮಾನ. ಸಲಿಂಗಕಾಮ ಅಥವಾ ವಿಭಿನ್ನ ಕಾಮವು ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಮೇಲ್ವರ್ಗಗಳಿಗೆ ಸೀಮಿತವಾಗಿಲ್ಲ.
- ಪರಸ್ಪರ ಪ್ರೀತಿ ಮತ್ತು ಸಂಪರ್ಕವನ್ನು ಅನುಭವಿಸುವ ನಮ್ಮ ಸಾಮರ್ಥ್ಯವು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಅಗತ್ಯವು ನಮ್ಮನ್ನು ನಾವಾಗುವಂತೆ ಮಾಡುತ್ತದೆ. ಈ ಸಂಬಂಧಗಳು ಹಲವು ರೂಪಗಳನ್ನು ತೆಗೆದುಕೊಳ್ಳಬಹುದು, ಜನ್ಮಜಾತ ಕುಟುಂಬಗಳು, ಪ್ರಣಯ ಸಂಬಂಧಗಳು ಇತ್ಯಾದಿ.
- ಕುಟುಂಬದ ಭಾಗವಾಗುವ ಅಗತ್ಯವು ಮಾನವ ಗುಣಲಕ್ಷಣದ ಪ್ರಮುಖ ಭಾಗವಾಗಿದೆ ಮತ್ತು ಸ್ವಯಂ ಅಭಿವೃದ್ಧಿಗೆ ಮುಖ್ಯವಾಗಿದೆ.
- ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ವ್ಯಕ್ತಿಯ ಜೀವನ ಕ್ರಮವನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಮೂಲಕ್ಕೆ ಸಂಬಂಧಿಸಿದೆ.
- ದಾಂಪತ್ಯಕ್ಕೆ ಪ್ರವೇಶಿಸುವ ಹಕ್ಕು ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಮತ್ತು ಆ ದಾಂಪತ್ಯವನ್ನು ಗುರುತಿಸುವ ಹಕ್ಕನ್ನು ಒಳಗೊಂಡಿದೆ. ಅಂತಹ ಸಾಂಗತ್ಯಗಳನ್ನು ಗುರುತಿಸುವಲ್ಲಿ ವಿಫಲವಾದರೆ ಕ್ವಿಯರ್ ದಂಪತಿಗಳ ವಿರುದ್ಧ ತಾರತಮ್ಯ ಉಂಟಾಗುತ್ತದೆ.
- ಕ್ವಿಯರ್ಗಳು ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ. ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದಂತೆ ಆಗುವ ಸಾಮರ್ಥ್ಯ.
- ಕ್ವಿಯರ್ ವ್ಯಕ್ತಿಗಳ ಮೇಲೆ ತಾರತಮ್ಯ ಮಾಡಲಾಗದು ಎಂದು ಈ ನ್ಯಾಯಾಲಯ ಗುರುತಿಸಿದೆ. ವಸ್ತು ಪ್ರಯೋಜನಗಳು ಮತ್ತು ಸೇವೆಗಳು ಭಿನ್ನಲಿಂಗೀಯ ದಂಪತಿಗಳತ್ತ ಗಮನವಿಟ್ಟಿವೆ. ಹಾಗೆಂದು ಕ್ವಿಯರ್ ದಂಪತಿಗಳಿಗೆ ಇವನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ.
- ಅವಿವಾಹಿತ ದಂಪತಿಗಳು ತಮ್ಮ ಸಂಬಂಧದ ಬಗ್ಗೆ ಗಂಭೀರವಾಗಿಲ್ಲ ಎಂದು ಭಾವಿಸಲು ಸಾಧ್ಯವಿಲ್ಲ. ಆದ್ದರಿಂದ ವಿಭಿನ್ನ ದಂಪತಿಗಳು ಮಕ್ಕಳನ್ನು ದತ್ತು ಪಡೆಯುವ ಹಕ್ಕನ್ನು ನಿರಾಕರಿಸುವುದು ಅಸಾಂವಿಧಾನಿಕ.
- ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ದಾಂಪತ್ಯಕ್ಕೆ ಪ್ರವೇಶಿಸುವ ಹಕ್ಕನ್ನು ನಿರ್ಬಂಧಿಸಲಾಗುವುದಿಲ್ಲ.
- ಕೌಟುಂಬಿಕ ವಿಚಾರಗಳಿಂದ ಸರ್ಕಾರದ ವ್ಯಾಪ್ತಿಯನ್ನು ಹಿಂತೆಗೆದುಕೊಳ್ಳುವುದರಿಂದ, ದುರ್ಬಲ ವ್ಯಕ್ತಿಗಳು ಅಸುರಕ್ಷಿತರಾಗುತ್ತಾರೆ. ಹೀಗಾಗಿ, ಖಾಸಗಿ ಜಾಗದಲ್ಲಿನ ಎಲ್ಲಾ ಆಪ್ತ ಚಟುವಟಿಕೆಗಳು ಕಾನೂನಾತ್ಮಕ ಆಡಳಿತದ ಪರಿಶೀಲನೆಯನ್ನು ಮೀರಿವೆ ಎಂದು ಹೇಳಲಾಗುವುದಿಲ್ಲ.
- ವಿಶೇಷ ವಿವಾಹ ಕಾಯಿದೆಯಲ್ಲಿ ಬದಲಾವಣೆಯನ್ನು ಸಂಸತ್ತು ನಿರ್ಧರಿಸುತ್ತದೆ. ಈ ನ್ಯಾಯಾಲಯವು ಶಾಸಕಾಂಗದ ವ್ಯಾಪ್ತಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸುತ್ತದೆ.
- ಪಡಿತರ ಚೀಟಿಗಳು, ಪಿಂಚಣಿ, ಗ್ರಾಚ್ಯುಟಿ ಮತ್ತು ಉತ್ತರಾಧಿಕಾರ ಹಕ್ಕು ಸೇರಿದಂತೆ ಸಲಿಂಗ ದಂಪತಿಗಳ ಕಳವಳಗಳನ್ನು ಪರಿಹರಿಸಲು ಕೇಂದ್ರವು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯೊಂದಿಗೆ ಮುಂದುವರಿಯಬೇಕು.
- ಟ್ರಾನ್ಸ್ಜೆಂಡರ್ ಪುರುಷನು ಮಹಿಳೆಯನ್ನು ಮದುವೆಯಾಗಬಹುದು, ಮತ್ತು ಟ್ರಾನ್ಸ್ಜೆಂಡರ್ ಮಹಿಳೆಯು ಪುರುಷನನ್ನು ಮದುವೆಯಾಗಬಹುದು.
- ಸಲಿಂಗ ವಿವಾಹಗಳನ್ನು ಗುರುತಿಸದ ಕಾರಣ ವಿಶೇಷ ವಿವಾಹ ಕಾಯಿದೆಯನ್ನು ಅಸಾಂವಿಧಾನಿಕ ಎನ್ನಲು ಸಾಧ್ಯವಿಲ್ಲ. ಹೊಸ ವಿವಾಹ ವ್ಯವಸ್ಥೆಯನ್ನು ರಚಿಸಲು ನಾವು ಸಂಸತ್ತು ಅಥವಾ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: Same sex marriage verdict: ಸಲಿಂಗ ವಿವಾಹ ಮಾನ್ಯತೆ ಚೆಂಡು ಸಂಸತ್ ಅಂಗಳಕ್ಕೆ; ಸುಪ್ರೀಂ ಕೋರ್ಟ್ನಿಂದ 4 ಪ್ರತ್ಯೇಕ ತೀರ್ಪು