ಹೊಸದಿಲ್ಲಿ: ದೇಶದಲ್ಲಿ ಸಲಿಂಗ ವಿವಾಹಕ್ಕೆ ಸಮಾನ ಮಾನ್ಯತೆಯ ಕುರಿತು ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ಸಾಂವಿಧಾನಿಕ ನ್ಯಾಯಪೀಠ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯಿದೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಈ ನಡುವೆ, ಕ್ವಿಯರ್ ಜೋಡಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಬಂಧಿಸುವಂತಿಲ್ಲ ಎಂದೂ ನ್ಯಾಯಪೀಠ ಹೇಳಿದೆ.
ಪೀಠದ ಐವರು ನ್ಯಾಯಾಧೀಶರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಮಂಡಿಸಿದ ಪರಿಣಾಮ, ತೀರ್ಪಿನಲ್ಲಿ ನಾಲ್ಕು ಪ್ರತ್ಯೇಕ ಮಂಡನೆಗಳನ್ನು ಮಾಡಲಾಗಿದೆ. ಸಿಜೆಐ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.
ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯಿದೆಯ (SMA) ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ. ವಿಶೇಷ ವಿವಾಹ ಕಾಯಿದೆಯಲ್ಲಿ ಬದಲಾವಣೆಯನ್ನು ಸಂಸತ್ತು ನಿರ್ಧರಿಸಬೇಕು. ಈ ನ್ಯಾಯಾಲಯವು ಶಾಸಕಾಂಗದ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದೇವೆ. ವಿವಾಹ ವ್ಯವಸ್ಥೆಯೊಳಗೆ ಪ್ರವೇಶಿಸುವ ಹಕ್ಕಿನಲ್ಲಿ, ವ್ಯಕ್ತಿಯು ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಮತ್ತು ಆ ವಿವಾಹವನ್ನು ಶಾಸನವು ಗುರುತಿಸುವ ಹಕ್ಕು ಎರಡನ್ನೂ ಒಳಗೊಂಡಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಕ್ವಿಯರ್‌ಗಳ (ವಿಭಿನ್ನ ಲೈಂಗಿಕ ಆದ್ಯತೆಗಳನ್ನು ಹೊಂದಿರುವವರು) ಕುರಿತು ತಾರತಮ್ಯ ಮಾಡಲು ಸಾಧ್ಯವಿಲ್ಲ. ಎಲ್ಲ ಬಗೆಯ ವಸ್ತುಗಳು, ಪ್ರಯೋಜನಗಳು ಮತ್ತು ಸೇವೆಗಳು ಭಿನ್ನಲಿಂಗೀಯ ದಂಪತಿಗಳತ್ತ ನಿರ್ದೇಶಿತವಾಗಿವೆ. ಆದರೆ ವಿಭಿನ್ನ ದಂಪತಿಗಳಿಗೆ ಇವುಗಳನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಟ್ರಾನ್ಸ್‌ಜೆಂಡರ್ ಪುರುಷನು ಮಹಿಳೆಯನ್ನು ಮತ್ತು ಟ್ರಾನ್ಸ್‌ಜೆಂಡರ್ ಮಹಿಳೆಯು ಪುರುಷನನ್ನು ಮದುವೆಯಾಗಬಹುದು ಎಂದು ಸಿಜೆಐ ಹೇಳಿದ್ದಾರೆ.
ವಿವಾದಿತ ಸಂಗತಿಯಿಂದ ರಾಜ್ಯಾಧಿಕಾರವನ್ನು ಹಿಂತೆಗೆದುಕೊಂಡರೆ ದುರ್ಬಲ ಪಕ್ಷವು ಅಸುರಕ್ಷಿತವಾಗುತ್ತದೆ. ಹೀಗಾಗಿ ಖಾಸಗಿ ಜಾಗದೊಳಗೆ ನಡೆಯುವ ಎಲ್ಲಾ ಆಪ್ತ ಖಾಸಗಿ ಚಟುವಟಿಕೆಗಳು ಸರ್ಕಾರದ ಪರಿಶೀಲನೆಯನ್ನು ಮೀರಿವೆ ಎಂದು ಹೇಳಲಾಗುವುದಿಲ್ಲ. ಪ್ರಸ್ತುತ ಅರ್ಜಿಗಳ ಪ್ರಕಾರ, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿಲ್ಲ ಎಂಬ ಕಾರಣಕ್ಕಾಗಿ ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 4 ಅನ್ನು ಅಸಾಂವಿಧಾನಿಕ ಎಂದು ಪರಿಗಣಿಸಿದರೆ, ಕಾಯಿದೆಯನ್ನು ರದ್ದುಪಡಿಸಬೇಕಾಗುತ್ತದೆ. ಆಗ ಅದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯುತ್ತದೆ. ವಿಶೇಷ ವಿವಾಹ ಕಾಯಿದೆಯ ಶಬ್ದಾರ್ಥಗಳನ್ನು ವಿಶ್ಲೇಷಿಸಲು ನ್ಯಾಯಾಲಯವು ಸಜ್ಜುಗೊಂಡಿಲ್ಲ. ಅದು ಸಂಸತ್ತಿನ ಹೊಣೆ ಎಂದು ಸಿಜೆಐ ಡಿವೈ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಮಕ್ಕಳ ದತ್ತು ಸ್ವೀಕಾರದ ಕುರಿತು
ಭಿನ್ನಲಿಂಗೀಯ ದಂಪತಿಗಳು ಮಾತ್ರ ಉತ್ತಮ ಪೋಷಕರಾಗಬಹುದು ಎಂದು ಕಾನೂನು ಹೇಳುವುದಿಲ್ಲ. ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ದತ್ತು ನಿಯಮಗಳು ವಿಭಿನ್ನ ದಂಪತಿಗಳ ಕುರಿತು ಸಂವಿಧಾನದ ಉಲ್ಲಂಘನೆಯಾಗಿದೆ. ಸಿಎಆರ್‌ಎ ಸುತ್ತೋಲೆ (ಇದು ಕ್ವಿಯರ್ ದಂಪತಿಗಳು ದತ್ತು ತೆಗೆದುಕೊಳ್ಳುವುದನ್ನು ನಿರಾಕರಿಸುತ್ತದೆ) ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಅವರು ದತ್ತು ಹಕ್ಕುಗಳ ಬಗ್ಗೆ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 10 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಮೇ 11ರಂದು ಈ ವಿಚಾರದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದ ಇತರ ಸದಸ್ಯರು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ. ಏಪ್ರಿಲ್ 18ರಂದು ಈ ವಿಷಯದ ವಾದಗಳು ಪ್ರಾರಂಭವಾಗಿದ್ದವು. ಸುಮಾರು 21 ಅರ್ಜಿಗಳು ಈ ವಿಚಾರದಲ್ಲಿ ಸಲ್ಲಿಕೆಯಾಗಿದ್ದವು. ಸುಪ್ರೀಂ ಕೋರ್ಟ್, ಸಲಿಂಗ ವಿವಾಹಗಳಿಗೆ ನ್ಯಾಯಾಂಗ ಮಾನ್ಯತೆ ಕೋರಿ ಅರ್ಜಿಗಳನ್ನು ನಿರ್ಧರಿಸುವಾಗ ವಿವಾಹಗಳನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳಿಗೆ ತಾನು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಕೇಂದ್ರವು ಈ ವಿಷಯದಲ್ಲಿ ಯಾವುದೇ ಸಾಂವಿಧಾನಿಕ ಘೋಷಣೆಯು ಸರಿಯಾದ ಕ್ರಮ ಅಲ್ಲ ಎಂದು ಹೇಳಿದೆ. ಇದಲ್ಲದೆ ಈ ವಿಷಯದಲ್ಲಿ ರಾಜ್ಯಗಳಿಂದ ಬಂದ ಪ್ರತಿಕ್ರಿಯೆಗಳ ಪ್ರಕಾರ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಅಂತಹ ವಿವಾಹಕ್ಕೆ ಕಾನೂನು ಅನುಮೋದನೆಯನ್ನು ವಿರೋಧಿಸಿವೆ.