ಅಬುಧಾಬಿ: ಭಾರತ ಸೇರಿ 16 ರಾಷ್ಟ್ರಗಳಿಗೆ ಯಾವ ಕಾರಣಕ್ಕೂ ಸದ್ಯ ಪ್ರಯಾಣ ಬೇಡ ಎಂದು ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಈ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದೇ ಸೌದಿಯ ಆತಂಕಕ್ಕೆ ಕಾರಣ. ಆದರೆ, ಅಚ್ಚರಿ ಎಂದರೆ ಎಂದರೆ ಭಾರತದ ಪ್ರಯಾಣಿಕರು ಸೌದಿ ಬರಬಾರದು ಎಂದು ಮಾತ್ರ ಎಲ್ಲೂ ಹೇಳಿಲ್ಲ.
ಭಾರತ ಹೊರತಾಗಿ ಪ್ರಯಾಣ ನಿರ್ಬಂಧಕ್ಕೆ ಒಳಗಾದ ಇತರ ರಾಷ್ಟ್ರಗಳೆಂದರೆ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಆಫಘಾನಿಸ್ತಾನ, ಯೆಮೆನ್, ಸೋಮಾಲಿಯಾ, ಇಥಿಯೋಪಿಯಾ, ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರುಸ್ ಮತ್ತು ವೆನಿಜುವೆಲಾ. ಸೌದಿ ಅರೇಬಿಯಾ ಸರಕಾರಕ್ಕೆ ಸೇರಿದ ಪಾಸ್‌ಪೋರ್ಟ್‌ಗಳ ಮಹಾ ನಿರ್ದೇಶನಾಲಯ ಈ ಪ್ರಯಾಣ ನಿರ್ಬಂಧವನ್ನು ವಿಧಿಸಿದೆ. ಮುಂದಿನ ಆದೇಶದವರೆಗೆ ಈ ದೇಶಗಳಿಗೆ ಪ್ರಯಾಣಿಸದಂತೆ ಸರಕಾರ ಸೂಚಿಸಿದೆ.
ಸಮಸ್ಯೆ ಏನು?
ಸೌದಿಯ ನಾಗರಿಕರು ಈ ದೇಶಗಳಿಗೆ ಹೋಗದಂತೆ ಸೂಚಿಸಿರುವ ಜತೆಗೆ ಸರಕಾರ ಆ ದೇಶಗಳಿಗೆ ಇರುವ ವಿಮಾನ ಸಂಚಾರವನ್ನು ಕೂಡಾ ರದ್ದುಪಡಿಸಿದೆ. ಅಂದರೆ ಇಲ್ಲಿಂದ ನಿಗದಿತ ಹದಿನಾರು ರಾಷ್ಟ್ರಗಳಿಗೆ ವಿಮಾನ ಸೌಕರ್ಯಗಳೂ ರದ್ದುಗೊಳ್ಳುವುದರಿಂದ ಅಲ್ಲಿನ ನಾಗರಿಕರಿಗೆ ಸಮಸ್ಯೆ ಆಗಲಿದೆ. ಭಾರತಕ್ಕೆ ವಿಮಾನಗಳು ಬಾರದೆ ಇದ್ದರೆ ಅಲ್ಲಿರುವ ಭಾರತೀಯರ ಓಡಾಟಕ್ಕೂ ತಡೆಯಾಗಲಿದೆ.
ಮಂಕಿ ಪಾಕ್ಸ್ ಇಲ್ಲ
ಈ ನಡುವೆ, ದೇಶದಲ್ಲಿ ಮಂಕಿ ಪಾಕ್ಸ್ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಆದರೂ ಅದರ ಪ್ರವೇಶ ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಹರಡ್ತಿದೆ ಮಂಕಿ ಪಾಕ್ಸ್, ಏನಿದು ಹೊಸ ರೋಗ, ಎಷ್ಟು ಭಯಾನಕ?