ಹೊಸದಿಲ್ಲಿ: ಖಲಿಸ್ತಾನ್ ಉಗ್ರ (Khalistan Terrorist) ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆ ಸಂಚು (Murder plot) ಆರೋಪದಲ್ಲಿ ಬಂಧಿತನಾಗಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ (Nikhil Gupta) ವಿಚಾರದಲ್ಲಿ ಮಧ್ಯೆ ಪ್ರವೇಶಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಇದು ʼಸೂಕ್ಷ್ಮ ವಿಚಾರʼ ಎಂದು ಕೋರ್ಟ್ ಹೇಳಿದೆ.
ನ್ಯೂಯಾರ್ಕ್‌ನಲ್ಲಿರುವ ಖಲಿಸ್ತಾನ್ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಭಾರತೀಯ ಮೂಲದ ಉದ್ಯಮಿ ನಿಖಿಲ್ ಗುಪ್ತಾನನ್ನು ಝೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ಈತ ಅಮೆರಿಕ ನ್ಯಾಯಾಲಯದಲ್ಲಿ ಆರೋಪಿಯಾಗಿದ್ದು, ಈತನನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಝೆಕ್ ಗಣರಾಜ್ಯ ಮುಂದಾಗಿದೆ.
ನಿಖಿಲ್ ಗುಪ್ತಾನ ಕುಟುಂಬದ ಸದಸ್ಯರೊಬ್ಬರು ಗುಪ್ತಾ ಅವರ ದೋಷಾರೋಪಣೆ ಮತ್ತು ಹಸ್ತಾಂತರವನ್ನು ಪ್ರಶ್ನಿಸಲು ಗುಪ್ತಾಗೆ ಕಾನೂನು ನೆರವು ಹಾಗೂ ಕಾನ್ಸುಲರ್ ಮಧ್ಯಪ್ರವೇಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. “ಇದು ಸೂಕ್ಷ್ಮ ವಿಷಯವಾಗಿದ್ದು, ಇದನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಭಾರತ ಸರ್ಕಾರ ನಿರ್ಧರಿಸುತ್ತದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ನ್ಯಾಯಾಲಯಗಳ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ವಿದೇಶಿ ನ್ಯಾಯಾಲಯದ ವ್ಯಾಪ್ತಿಯನ್ನು ಗೌರವಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ ಮೂಲದ ಉದ್ಯಮಿ ನಿಖಿಲ್ ಗುಪ್ತಾ ಅವರನ್ನು 2023ರಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಯಿತು. ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಯುಎಸ್ ಆತನ ಮೇಲೆ ಹೊರಿಸಿದೆ. ನಿಖಿಲ್ ಗುಪ್ತಾ ಭಾರತದ ಸರ್ಕಾರಿ ಏಜೆಂಟ್‌ನೊಂದಿಗೆ ಸಂಚಿನಲ್ಲಿ ಭಾಗಿಯಾಗಿದ್ದಾನೆ ಮತ್ತು ಪನ್ನುನ್‌ನನ್ನು ಕೊಲ್ಲಲು ಒಬ್ಬ ಹಿಟ್‌ಮ್ಯಾನ್ ಅನ್ನು ನೇಮಿಸಿಕೊಂಡಿದ್ದಾನೆ ಎಂದು US ಹೇಳಿದೆ.
ಇದನ್ನೂ ಓದಿ: Khalistan Terrorists: ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಾಲಯ ವಿರೂಪ, ಭಾರತ ತೀವ್ರ ಖಂಡನೆ
ಆರೋಪಗಳು ತುಂಬಾ ಗಂಭೀರವಾಗಿರುವುದರಿಂದ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ನವದೆಹಲಿ ಹೇಳಿದೆ. ನಿಖಿಲ್ ಗುಪ್ತಾ ಅವರ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಗುಪ್ತಾ ಅವರನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ, ಹಂದಿಮಾಂಸವನ್ನು ತಿನ್ನಲು ಅವರನ್ನು ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
“ತಮ್ಮ ಬಂಧನ ಅಕ್ರಮವಾಗಿದೆ. ಯಾವುದೇ ಔಪಚಾರಿಕ ಬಂಧನ ವಾರಂಟ್ ಅನ್ನು ತೋರಿಸಿಲ್ಲ. ಸ್ಥಳೀಯ ಝೆಕ್ ಅಧಿಕಾರಿಗಳ ಬದಲು US ಏಜೆಂಟರುಗಳು ಗುಪ್ತಾರನ್ನು ಸೆರೆಯಲ್ಲಿಟ್ಟಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನವೆಂಬರ್ 29ರಂದು ಯುಎಸ್ ಆರೋಪಪಟ್ಟಿಯಲ್ಲಿ ನಿಖಿಲ್ ಗುಪ್ತಾ ಹೆಸರು ಮೊದಲ ಬಾರಿಗೆ ಕಾಣಿಸಿಕೊಂಡಿತು. ನ್ಯೂಯಾರ್ಕ್‌ನಲ್ಲಿ ಪನ್ನುನ್‌ನನ್ನು ಕೊಲ್ಲಲು ಕೊಲೆಗಡುಕನಿಗೆ $100,000 ಪಾವತಿಸಲು ಈತ ಒಪ್ಪಿಕೊಂಡಿದ್ದ ಎಂಬ ಆರೋಪ ಹೊರಿಸಲಾಗಿದೆ. ಜೂನ್ 30, 2023ರಂದು ನಿಖಿಲ್ ಗುಪ್ತಾ ಝೆಕ್ ಗಣರಾಜ್ಯಕ್ಕೆ ಆಗಮಿಸಿದಾಗ US ವಿನಂತಿಯ ಮೇರೆಗೆ ಬಂಧಿಸಲಾಯಿತು.
ಇದನ್ನೂ ಓದಿ: ಪನ್ನುನ್ ಕೊಲೆ ಸಂಚು: ಭಾರತದ ಸುಪ್ರೀಂ ಕೋರ್ಟ್ ಬಗ್ಗೆ ಝೆಕ್ ಸರ್ಕಾರ ಹೇಳಿದ್ದೇನು?