Site icon Vistara News

Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್;‌ ಸಾವಿಗೆ ಭಾರತ ಖಂಡನೆ

jaahnavi kandula

Seattle officer recorded joking about Indian Student Jaahnavi Kandula killed by a police car, India Reacts

ವಾಷಿಂಗ್ಟನ್‌: ಅಮೆರಿಕದ ಸಿಯಾಟಲ್‌ನಲ್ಲಿ ಭಾರತದ ಜಾಹ್ನವಿ ಕಂಡುಲಾ (Jaahnavi Kandula) ಎಂಬ 23 ವರ್ಷದ ವಿದ್ಯಾರ್ಥಿನಿಯು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾಹ್ನವಿ ಕಂಡುಲಾ ಅವರಿಗೆ ಪೊಲೀಸ್‌ ವಾಹನ ಡಿಕ್ಕಿಯಾಗಿದ್ದು, ಇದಾದ ಬಳಿಕ ಪೊಲೀಸ್‌ ಅಧಿಕಾರಿಯು ದರ್ಪ ತೋರಿದ ವಿಡಿಯೊ ಈಗ ವೈರಲ್‌ ಆಗಿದೆ. ಹಾಗೆಯೇ, ಪೊಲೀಸರ ದರ್ಪವನ್ನು ಭಾರತ ಖಂಡಿಸಿದ್ದು, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಕಳೆದ ಜನವರಿಯಲ್ಲಿ ಸಿಯಾಟಲ್‌ನಲ್ಲಿ ಜಾಹ್ನವಿಗೆ ಪೊಲೀಸ್‌ ವಾಹನ ಡಿಕ್ಕಿಯಾಗಿದೆ. ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಎಂಬುವರು ಗಂಟೆಗೆ ಸುಮಾರು 120 ಕಿಲೋಮೀಟರ್‌ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾಗ ಜಾಹ್ನವಿ ಕಂಡುಲಾ ಅವರಿಗೆ ಡಿಕ್ಕಿಯಾಗಿದೆ. ಇದೇ ವೇಳೆ ವಾಹನದಲ್ಲಿದ್ದ ಸಿಯಾಟಲ್‌ ಪೊಲೀಸ್‌ ಆಫೀಸರ್ಸ್‌ ಗಿಲ್ಡ್‌ ಉಪಾಧ್ಯಕ್ಷ ಡ್ಯಾನಿಯಲ್‌ ಆಡೆರರ್‌ ಅಪಘಾತದ ಕುರಿತು ಜೋಕ್‌ ಮಾಡಿದ್ದಾರೆ.

ಅಪಹಾಸ್ಯ ಮಾಡಿದ ವಿಡಿಯೊ

“ಓಹ್‌ ಅವಳು ಸತ್ತೇ ಹೋದಳು. 11 ಸಾವಿರ ಡಾಲರ್‌ ಮೊತ್ತದ ಚೆಕ್‌ ಬರೆದು ಬಿಸಾಡೋಣ. ಓಹ್, ಅವಳಿಗೆ 26 ವರ್ಷ ವಯಸ್ಸಲ್ಲ, ಹಾಗಾದರೆ ಅವಳ ಜೀವಕ್ಕೆ ಹೆಚ್ಚಿನ ಬೆಲೆ ಇಲ್ಲ” ಎಂದು ನಕ್ಕಿರುವ ವಿಡಿಯೊ ಈಗ ಲಭ್ಯವಾಗಿದೆ. ಹಾಗಾಗಿ, ಜಾಹ್ನವಿ ಕಂಡುಲಾ ಸಾವಿನ ಕುರಿತು ಭಾರತ ಹಾಗೂ ಅಮೆರಿಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಇದನ್ನೂ ಓದಿ: UK Nurse: ರಕ್ಷಿಸಬೇಕಾದ ಕೈಗಳೇ 7 ಶಿಶುಗಳನ್ನು ಕೊಂದವು; ಈಕೆ ನರ್ಸ್‌ ಅಲ್ಲ ಹಂತಕಿ, ಹಿಡಿದಿದ್ದು ಭಾರತ ಮೂಲದ ವೈದ್ಯ

ಭಾರತ ಖಂಡನೆ, ತನಿಖೆಗೆ ಆಗ್ರಹ

ಜಾಹ್ನವಿ ಕಂಡುಲಾ ಸಾವಿನ ಕುರಿತು ಅಪಹಾಸ್ಯ ಮಾಡಿ ನಕ್ಕ ವಿಡಿಯೊ ವೈರಲ್‌ ಆಗುತ್ತಲೇ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್‌ ಖಂಡನೆ ವ್ಯಕ್ತಪಡಿಸಿದೆ. “ಇದು ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಕೂಡಲೇ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದೆ. ಆದಾಗ್ಯೂ, ಭಾರಿ ಆಕ್ರೋಶದ ಬಳಿಕ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಯಾಟಲ್‌ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕಡಪ ಮೂಲದವರಾದ ಜಾಹ್ನವಿ ಕಂಡುಲಾ ಅವರು ಸಿಯಾಟಲ್‌ನಲ್ಲಿರುವ ನಾರ್ತ್‌ ಈಸ್ಟ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. 2023ರ ಜನವರಿ 26ರಂದು ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅತಿಯಾದ ವೇಗದಿಂದ ವಾಹನ ಚಲಾಯಿಸಿದ ಪೊಲೀಸ್‌ ಅಧಿಕಾರಿಗಳು, ಅಪಘಾತದ ಬಳಿಕ ಅಪಹಾಸ್ಯ ಮಾಡಿರುವ ವಿಡಿಯೊ ಕಳೆದ ಜುಲೈನಲ್ಲಿ ಹರಿದಾಡಿದೆ. ಪ್ರಕರಣವೀಗ ಗಂಭೀರ ಸ್ವರೂಪ ತಾಳಿದೆ.

Exit mobile version