Site icon Vistara News

Security Breach: ಸಂಸತ್‌ ತಪಾಸಣೆ ವೈಫಲ್ಯ; 8 ಸಿಬ್ಬಂದಿ ಸಸ್ಪೆಂಡ್‌

Security breach in Lok Sabha

ಹೊಸದಿಲ್ಲಿ: ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ (Security Breach in Lok Sabha) ಕಲರ್‌ ಗ್ಯಾಸ್‌ ಸಿಡಿಸಿದ ಘಟನೆಯ ಬಗ್ಗೆ ಒಂದೊಂದೇ ಮಾಹಿತಿ ಹೊರ ಬೀಳತೊಡಗಿದೆ. ಭದ್ರತಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ. ಏಳು ಮಂದಿ ಆರೋಪಿಗಳು ದಾಳಿಯನ್ನು ಸಾಕಷ್ಟು ಪ್ಲ್ಯಾನ್‌ ಮಾಡಿಯೇ ಸಂಘಟಿಸಿದ್ದರು ಎಂದು ತಿಳಿದುಬಂದಿದೆ. ಆ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಎಂಟು ಸಂಸತ್ ಸಿಬ್ಬಂದಿಯನ್ನು (Duty Staff) ಅಮಾನತುಗೊಳಿಸಲಾಗಿದೆ.

ಮೂಲಗಳ ಪ್ರಕಾರ ಆರೋಪಿಗಳು ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಮತ್ತು ಕೆಲವು ದಿನಗಳ ಹಿಂದೆ ಯೋಜನೆ ರೂಪಿಸಿದ್ದರು. ಆರೋಪಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಬುಧವಾರ ಸಂಸತ್ತಿಗೆ ಬರುವ ಮೊದಲು ಪರಿಶೀಲನೆ ನಡೆಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರು ಮಂದಿಯ ಬಂಧನ

ಘಟನೆ ಸಂಬಂಧ ಮೈಸೂರಿನ ಡಿ. ಮನೋರಂಜನ್, ಉತ್ತರ ಪ್ರದೇಶದ ಸಾಗರ್ ಶರ್ಮಾ(, ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ, ಹರ್ಯಾಣದ ಹಿಸಾರ್‌ನ ನೀಲಮ್ ದೇವಿ, ಗುರುಗ್ರಾಮದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪೈಕಿ ಡಿ. ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ಲೋಕಸಭೆ ಒಳಗೆ ಕಲರ್ ಸ್ಪ್ರೇ ಸಿಡಿಸಿದರೆ, ನೀಲಂದೇವಿ ಮತ್ತು ಅಮೋಲ್ ಶಿಂಧೆ ಅವರು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಕಲರ್ ಗ್ಯಾಸ್ ಕ್ಯಾನಸ್ಟರ್‌ಗಳನ್ನು ಸಿಡಿಸಿದರು. ಈ ಕೃತ್ಯದ ಯೋಜನೆಯನ್ನು ರೂಪಿಸಿದವರ ಪೈಕಿ ಇನ್ನಿಬ್ಬರಾದ ಗುರುಗ್ರಾಮದ ಲಲಿತಾ ಝಾ ಮತ್ತು ವಿಕ್ಕಿ ಶರ್ಮಾ ಅವರು ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು.

ಕಲಾಪದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸುವ ಮೊದಲು ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಅವರಿಗೆ, ಮೈಸೂರು-ಕೊಡಗಿನ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯ ವಿನಂತಿ ಮೇರೆಗೆ ಪಾಸ್‌ಗಳನ್ನು ನೀಡಲಾಗಿತ್ತು.

ಈ ಕೃತ್ಯವನ್ನು ನಡೆಸಿರುವ ಆರೂ ಜನರು ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಯದವರಾಗಿದ್ದಾರೆ. ಎಲ್ಲರೂ ಸೇರಿಯೇ ಈ ಸಂಚು ರೂಪಿಸಿದ್ದಾರೆ. ತಮ್ಮ ಯೋಜನೆಯ ಭಾಗವಾಗಿ ಸಂಸತ್ತಿನ ಸಂಕೀರ್ಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದರು. ವಾಸ್ತವದಲ್ಲಿ ಆರೂ ಜನರು ಲೋಕಸಭೆಗೆ ಹೋಗಲು ಪ್ರಯತ್ನಿಸಿದ್ದರು. ಆದರೆ, ಸಾಗರ್ ಶರ್ಮಾ ಮತ್ತು ಮನೋರಂಜನ್ ಪಾಸ್‌ಗಳನ್ನು ಪಡೆಯಲು ಯಶಸ್ವಿಯಾದರು. ಸದ್ಯದ ವಿಚಾರಣೆಯ ಪ್ರಕಾರ, ಈ ಆರೂ ಜನಕ್ಕೆ ಯಾವುದೇ ಭಯೋತ್ಪಾದನೆಯ ಸಂಘಟನೆಗಳೊಂದಿಗೆ ನಂಟಿರುವ ಪುರಾವೆಗಳಿಲ್ಲ.

ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಕರ್ನಾಟಕದ ಡಿ ಮನೋರಂಜನ್ ಅವರ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. 42 ವರ್ಷದ ನೀಲಂ ದೇವಿ ಅವರು ಶಿಕ್ಷಕಿಯಾಗಿದ್ದು, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ನೀಲಂ ಅವರ ಸಹೋದರನ ಪ್ರಕಾರ, 2020ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯಲ್ಲಿ ನೀಲಂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ, ಆಕೆ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Security breach in Lok Sabha: ಸಂಸತ್ ಭದ್ರತಾ ವೈಫಲ್ಯ ಕುರಿತು ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

Exit mobile version