Site icon Vistara News

ಸಂಸತ್‌ ದಾಳಿ ಪ್ರಕರಣ: ಮತ್ತಿಬ್ಬರು ಪೊಲೀಸರ ವಶಕ್ಕೆ, ಇವರ ಪಾತ್ರ ಏನು?

mahesh

mahesh

ನವದೆಹಲಿ: ಸಂಸತ್‌ನ ಒಳಗೆ ನುಗ್ಗಿ ದಾಂಧಲೆ ಎಬ್ಬಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಇನ್ನೂ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ (Security Breach In Lok Sabha). ಸಂಸತ್ತಿನ ಮೇಲೆ 2001ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್‌ 13ರಂದು ಈ ದಾಳಿ ನಡೆದಿತ್ತು. ಪ್ರಕರಣದ ಐದನೇ ಆರೋಪಿ ಕೋಲ್ಕತಾ ನಿವಾಸಿ ಲಲಿತ್ ಝಾ (35) ಗುರುವಾರ ತಡರಾತ್ರಿ ಪೊಲೀಸರಿಗೆ ಶರಣಾದ ನಂತರ ಮಹೇಶ್ ಮತ್ತು ಕೈಲಾಶ್ ಎಂಬ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಪೊಲೀಸರು ಹೇಳಿದ್ದೇನು?

ಪೊಲೀಸ್‌ ಅಧಿಕಾರಿಯೊಬ್ಬರು ಮಾತನಾಡಿ, ವಶಕ್ಕೆ ಪಡೆಯಲಾದ ಮಹೇಶ್, ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಜತೆಗೆ ಇದ್ದ ಮತ್ತು ಆತನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಸೆಲ್‌ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಮಹೇಶ್‌ ವಿಚಾರಣೆಯ ಸಮಯದಲ್ಲಿ ಪ್ರಕರಣದಲ್ಲಿ ಕೈಲಾಶ್ ಪಾತ್ರದ ಬಗ್ಗೆಯೂ ಮಾಹಿತಿ ಹೊರಬಂದಿತು. ಬಳಿಕ ಆತನನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.

ಲಲಿತ್ ಝಾ ಬಸ್ ಮೂಲಕ ರಾಜಸ್ಥಾನಕ್ಕೆ ಪ್ರಯಾಣಿಸಿದ್ದು, ದೆಹಲಿಗೆ ಮರಳುವ ಮೊದಲು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಮಹೇಶ್‌ನ ಹೇಳಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸೋಷಿಯಲ್‌ ಮೀಡಿಯಾ ಗ್ರೂಪ್‌ನ ಮೂಲಕ ಲಲಿತ್‌ ಝಾ ಮತ್ತು ಮಹೇಶ್ ಪರಿಚಿತರಾಗಿದ್ದರು ಎನ್ನಲಾಗಿದೆ.

ಮಹೇಶ್‌ ಹೇಳಿದ್ದೇನು?

ಪ್ರಾಥಮಿಕ ವಿಚಾರಣೆಯ ವೇಳೆ ಮಹೇಶ್ ಕೂಡ ಸಂಸತ್ತಿನಲ್ಲಿ ನಡೆಸಿದ ʼಪ್ರತಿಭಟನೆʼಯ ಭಾಗವಾಗಲು ಬಯಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್‌ ಒಳ ನುಗ್ಗುವ ಮೊದಲು ಅಪರಾಧಿಗಳು ಲಕ್ನೋದಲ್ಲಿ ಎರಡು ಜೋಡಿ ಬೂಟುಗಳಲ್ಲಿ ಹೊಗೆಯ ಡಬ್ಬಿಯನ್ನು ಅಡಗಿಸಿಡಲು 2.5 ಇಂಚು ಆಳದ ಕುಳಿಗಳನ್ನು ಕೆತ್ತಿಸಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿನ ಮಹೇಶ್‌ ಮತ್ತು ಕೈಲಾಶ್‌ ಪಾತ್ರದ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಯಾರು ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್ ಝಾ?

ಇನ್ನು ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್‌ ಝಾ ಲಲಿತ್ ಝಾ ನವದೆಹಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಹೋಗಿ ಗುರುವಾರ ಶರಣಾಗಿದ್ದ. ಲಲಿತ್ ಝಾ ಬಿಹಾರ ಮೂಲದವನಾಗಿದ್ದು, ಕೋಲ್ಕತ್ತಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರಿಂದ ಲಲಿತ್ ಝಾ ಸ್ಫೂರ್ತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಲಲಿತ್ ಝಾ ರಾಜಸ್ಥಾನದ ನಾಗೌರ್ ತಲುಪಿದ್ದ. ನಂತರ ಇಬ್ಬರು ಸ್ನೇಹಿತರನ್ನು ಭೇಟಿಯಾಗಿ ರಾತ್ರಿ ಹೋಟೆಲ್‌ನಲ್ಲಿ ತಂಗಿದ್ದ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ಅರಿತುಕೊಂಡ ಲಲಿತ್ ಝಾ ಬಸ್ ಮೂಲಕ ದೆಹಲಿಗೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲಲಿತ್ ಝಾ, ಮನೋರಂಜನ್ ಡಿ, ಸಾಗರ್ ಶರ್ಮ, ನೀಲಂ ಆಜಾದ್, ಅಮೋಲ್ ಶಿಂಧೆ ಅವರು ಬುಧವಾರ ಸಂಸತ್ತಿನಲ್ಲಿ ಮತ್ತು ಸುತ್ತಮುತ್ತಲಿನ ದಾಂಧಲೆ ಮಾಡಿದ ಪ್ರಕರಣದ ಐದು ಪ್ರಮುಖ ಆರೋಪಿಗಳು. ಈ ‘ಮಿಷನ್’ಗೆ ಮುಂಚಿತವಾಗಿ ಅವರೆಲ್ಲರೂ ತಮ್ಮ ರಾಜ್ಯಗಳಿಂದ ಡಿಸೆಂಬರ್ 10ರಂದು ದೆಹಲಿಯನ್ನು ತಲುಪಿದ್ದರು. ವಿಶಾಲ್ ಶರ್ಮ ಅವರಿಗೆ ತಮ್ಮ ಗುರುಗ್ರಾಮದ ಮನೆಯಲ್ಲಿ ಆಶ್ರಯ ನೀಡಿದ್ದರು.

ಇದನ್ನೂ ಓದಿ: Security Breach In Lok Sabha: ತೃಣಮೂಲ ಕಾಂಗ್ರೆಸ್‌ ನಾಯಕನ ಜತೆ ಲೋಕಸಭೆ ದಾಳಿ ಸಂಚಿನ ರೂವಾರಿ, ಫೋಟೋ ವೈರಲ್‌

Exit mobile version