Site icon Vistara News

Security Breach in Lok Sabha: ದಾರಿ ತಪ್ಪಿದ ಕ್ರಾಂತಿಕಾರಿಗಳು? ಲೋಕಸಭೆಗೆ ನುಗ್ಗಿದವರ ಸೋಶಿಯಲ್‌ ಮೀಡಿಯಾದಲ್ಲಿ ಏನಿದೆ?

indian parliament attack suspects

ಹೊಸದಿಲ್ಲಿ: ನಿನ್ನೆ ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ (Security Breach in Lok Sabha) ಕಲರ್‌ ಗ್ಯಾಸ್‌ ಸಿಡಿಸಿದ ಆರು ಮಂದಿಯ ಸೋಶಿಯಲ್‌ ಮೀಡಿಯಾಗಳನ್ನೂ ಪೊಲೀಸರು ಜಾಲಾಡಿದ್ದು, ಆಶ್ಚರ್ಯ ಹುಟ್ಟಿಸುವ ಕೆಲವು ಸಂಗತಿಗಳು ಕಂಡುಬಂದಿವೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ಚಂದ್ರಶೇಖರ್ ಆಜಾದ್‌ರಂತಹ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳು; ಕ್ಯೂಬನ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಅಮೇರಿಕನ್ ಸಮಾಜವಾದಿ ಮತ್ತು ಕಾರ್ಮಿಕ ಕಾರ್ಯಕರ್ತ ಆಲ್ಬರ್ಟ್ ಪಾರ್ಸನ್ಸ್ ಅವರ ಕೋಟ್‌ಗಳು; ರೈತರ ಪ್ರತಿಭಟನೆಗಳ ಫೋಟೋಗಳು ಮತ್ತು ವೀಡಿಯೊಗಳು; ಮನರೇಗಾ ಕೆಲಸಗಾರರ ಫೋಟೋಗಳು- ಆರೋಪಿಗಳಲ್ಲಿ ಮೂವರು ಕಳೆದ ಎರಡು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಂಗತಿಗಳಾಗಿವೆ.

ಬುಧವಾರ ಇವರಲ್ಲಿ ಒಬ್ಬನಾದ ಲಲಿತ್ ಝಾ ಇನ್‌ಸ್ಟಾಗ್ರಾಮ್‌ನಲ್ಲಿ ಲೋಕಸಭೆಯ ಹೊರಗೆ ಘೋಷಣೆ ಕೂಗಿದ ಇಬ್ಬರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ನೀಲಂ ಸಿಂಗ್ ಆಜಾದ್ ಮತ್ತು ಅಮೋಲ್ ಶಿಂಧೆ ಕಲರ್‌ ಗ್ಯಾಸ್‌ ಸಿಡಿಸಿ “ಜೈ ಭೀಮ್”, “ಜೈ ಭಾರತ್” ಮತ್ತು “ಭಾರತ್ ಮಾತಾ ಕಿ ಜೈ” ಎಂದು ಕೂಗುತ್ತಿದ್ದಾರೆ. ಐವರು ಆರೋಪಿಗಳಲ್ಲಿ ಮೂವರ ಸೋಶಿಯಲ್‌ ಮೀಡಿಯಾ ಚಟುವಟಿಕೆಯ ಚಿತ್ರಣ ಇಲ್ಲಿದೆ.

ನೀಲಂ ಸಿಂಗ್

ನೀಲಂ ಸಿಂಗ್ ಫೇಸ್‌ಬುಕ್ ಪುಟ 313 ಅನುಯಾಯಿಗಳನ್ನು ಹೊಂದಿದೆ. ಅವಳು ತನ್ನನ್ನು ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದಾಳೆ. ʼಪ್ರಗತಿಶೀಲ ಆಜಾದ್ ಯುವ ಸಂಘಟನೆʼಯ (PAYS) ಸದಸ್ಯೆ ಎಂದು ತಿಳಿಸಿದ್ದಾಳೆ. ಜೂನ್ 4, 2023ರಂದು ಆಕೆಯ ಕೊನೆಯ ಪೋಸ್ಟ್‌ನಲ್ಲಿ ಆಕೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಎಳೆದೊಯ್ಯುತ್ತಿರುವ ಫೋಟೋ ಇದ್ದು, ಅದರಲ್ಲಿ ಗುಲಾಬಿ ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್‌ ಧರಿಸಿದ್ದಾಳೆ. ಜೊತೆಗೆ “ಅನ್ಯಾಯವನ್ನು ಸಹಿಸುವವನು ಅನ್ಯಾಯವನ್ನು ಮಾಡುವವನಿಗಿಂತ ಹೆಚ್ಚು ತಪ್ಪಿತಸ್ಥ. ನಾವೆಲ್ಲರೂ ಧ್ವನಿ ಎತ್ತೋಣ ಮತ್ತು ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡೋಣ. ಇಂಕಿಲಾಬ್ ಜಿಂದಾಬಾದ್ʼʼ ಎಂದು ಬರೆದಿದ್ದಾಳೆ. ಸ್ಥಳವನ್ನು ಜಂತರ್ ಮಂತರ್ ಎಂದು ಟ್ಯಾಗ್ ಮಾಡಲಾಗಿದೆ.

ಆಕೆಯ ಪ್ರೊಫೈಲ್ ಚಿತ್ರದಲ್ಲಿ ಒಂದು ಯುವಕರ ತಂಡವಿದೆ. ಅವರಲ್ಲಿ ಒಬ್ಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ಹಿಡಿದಿದ್ದಾನೆ. ಮಾರ್ಚ್ 23ರಂದು (ಶಹೀದ್ ದಿವಸ್) ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಮೂವರು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಶ್ರದ್ಧಾಂಜಲಿ ಪೋಸ್ಟ್ ಮಾಡಿದ್ದಾಳೆ. ಫೆಬ್ರವರಿ 5ರಂದು ಸಂತ ರವಿದಾಸ್ ಜಯಂತಿ ಮತ್ತು ಜನವರಿಯಲ್ಲಿ ಜಿಂದ್‌ನ ಘಾಸೋ ಖುರ್ದ್ ಗ್ರಾಮದ ಸಭೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ತಾನು ಮಾಡಿದ ಭಾಷಣಗಳ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ. ಈಕೆಗೆ ಪ್ರತಿಭಟನೆಗಳೇ ಕಸುಬಾಗಿತ್ತು ಎಂದು ಇದು ಸೂಚಿಸಿದೆ.

ಲಲಿತ್ ಝಾ

ಬುಧವಾರ ಮಧ್ಯಾಹ್ನ ಸಂಸತ್ತಿನ ಹೊರಗೆ ನೀಲಂ ಸಿಂಗ್ ಮತ್ತು ಶಿಂಧೆ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊವನ್ನು ಝಾ ಪೋಸ್ಟ್ ಮಾಡಿದ್ದಾನೆ. ತನ್ನನ್ನು ಶಿಕ್ಷಕ ಎಂದು ಕರೆದುಕೊಂಡಿದ್ದಾನೆ. Instagramನಲ್ಲಿ 293 ಅನುಯಾಯಿಗಳನ್ನು ಹೊಂದಿದ್ದಾನೆ. ಆತನ ಪ್ರೊಫೈಲ್‌ನಲ್ಲಿರುವ 535 ಪೋಸ್ಟ್‌ಗಳಲ್ಲಿ ಹಲವು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಬೋಸ್, ಆಜಾದ್, ಹಿಂದಿ ಕವಿಗಳಾದ ರಾಮಧಾರಿ ಸಿಂಗ್ ದಿನಕರ್, ಸೂರ್ಯಕಾಂತ್ ತ್ರಿಪಾಠಿ ನಿರಾಲಾ ಮತ್ತು ಹರಿಶಂಕರ್ ಪರ್ಸಾಯಿ ಅವರ ಉಲ್ಲೇಖಗಳಿವೆ. ನೀಲಂ ಸಿಂಗ್ ಸೆಪ್ಟೆಂಬರ್‌ನಿಂದೀಚಿಗೆ ಕನಿಷ್ಠ ಏಳು ಪೋಸ್ಟ್‌ಗಳಲ್ಲಿ ಈತನನ್ನು ಟ್ಯಾಗ್ ಮಾಡಿದ್ದಾಳೆ.

ಅಮೋಲ್ ಶಿಂಧೆ

ಲಾತೂರ್ ನಿವಾಸಿ, 25 ವರ್ಷದ ಅಮೋಲ್ ಶಿಂಧೆ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನ ಫೋಟೋವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈತ 357 ಅನುಯಾಯಿಗಳನ್ನು ಹೊಂದಿದ್ದಾನೆ. ಇವನ ಪ್ರೊಫೈಲ್ ಕೂಡ ಭಗತ್ ಸಿಂಗ್, ಆಜಾದ್ ಮತ್ತು ಬೋಸ್ ಅವರ ಪೋಸ್ಟ್‌ಗಳಿಂದ ತುಂಬಿದೆ. Instagramನಲ್ಲಿ ಇವನ ವಿವರಣೆಯಲ್ಲಿ “ಶಾಹೀದೋ ಕಿ ಶಹದತ್ ಕೊ ಸಲಾಮ್ ಔರ್ ನಮನ್” ಎಂದು ಬರೆಯಲಾಗಿದೆ. ಓಡುವುದನ್ನು ಆನಂದಿಸುತ್ತಾನಂತೆ. ಈ ವರ್ಷ ಆಗಸ್ಟ್ 10ರಂದು ದಿಲ್ಲಿಯ ಕರ್ತವ್ಯ ಪಥ್‌ನಿಂದ “ಶಾಂತ್, ಏಕಾಂತ್, ಅನಂತ್” ಎಂದು ಬರೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಆಗಸ್ಟ್‌ನಲ್ಲಿ ನಡೆದ ಮಾನ್ಸೂನ್ ಅಧಿವೇಶನದಲ್ಲಿ ಶಿಂಧೆ ಸೇರಿದಂತೆ ಐದು ಜನರಲ್ಲಿ ಮೂವರು ಸಂಸತ್ತಿಗೆ ಬಂದು ನೋಡಿಕೊಂಡು ಹೋಗಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Security Breach in Lok Sabha: ಲೋಕಸಭೆ ಭದ್ರತೆ ಲೋಪ ಆರೋಪಿಗಳ ಮೇಲೆ ಭಯೋತ್ಪಾದನೆ ತಡೆ ಕಾನೂನು

Exit mobile version