Site icon Vistara News

Self harming: ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ಆತ್ಮಹತ್ಯೆ

ಬಿಹಾರ: ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ (Self harming)ಗೆ ಶರಣಾಗಿರುವ ಘಟನೆ ಬಿಹಾರ(Bihar)ದ ಬದಾರಿಯಾದಲ್ಲಿ ನಡೆದಿದೆ. ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌ ರಸೂಲ್‌ಪುರ ಪೊಲೀಸ್‌ ಠಾಣೆ(Rasulpur police Station) ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್‌ ಹಾಲ್ಟರ್‌ ರೈಲು ನಿಲ್ದಾಣ(Mahendra Nath Halter Railway station)ದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲ್‌ ಸಿಂಗ್‌ ಬೇನತ್‌ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ತೆರಳಿದ್ದ. ಈ ವೇಳೆ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡಿದ್ದ ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.

ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್‌ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದ. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ಆಗಿತ್ತು. ಅಷ್ಟೇ ಅಲ್ಲದೇ ಪತಿ ಪತ್ನಿಯರ ಜಗಳಕ್ಕೆ ಗೋಪಾಲ್‌ ಬಾವ ಕೂಡ ಎಂಟ್ರಿ ಕೊಟ್ಟಿದ್ದ. ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ ಗೋಪಾಲ್‌ ಮೃತದೇಹವನ್ನು ರೈಲಿನಡಿಯಿಂದ ಹೊರ ತೆಗೆದು ಕುಟುಂಬಸ್ಥರಿಗೆ ಮಾಹಿತಿ ನೀಡಿದರು.

ಮೃತನ ಕುಟುಂಬಸ್ಥರು ಹೇಳೋದೇನು?

ಗೋಪಾಲ ಸಿಂಗ್‌ ಕುಟುಂಬಸ್ಥರು ಹೇಳುವ ಪ್ರಕಾರ ಆತನಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇತ್ತು. ಇದಕ್ಕೂ ಮುನ್ನ ದಿಲ್ಲಿ ಸಾರಿಗೆ ಮತ್ತು ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ, 10 ವರ್ಷದ ಮಗಳು ಹಾಗೂ ಅಣ್ಣನ ಜೊತೆ ಬದುಕುತ್ತಿದ್ದ ಎನ್ನಲಾಗಿದೆ. ಒಟ್ಟಿನಲ್ಲಿ ಕುಳಿತು ಬಗೆಹರಿಸಬಹುದಾಗಿದ್ದ ಸಮಸ್ಯೆ ಒಬ್ಬ ವ್ಯಕ್ತಿ ಸಾವಿಯಲ್ಲಿ ಅಂತ್ಯವಾಗಿರುವ ಬಗ್ಗೆ ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

ಕೆಲವು ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ಮೂವರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಬಳಿಕ ಅದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿತ್ತು. ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದಶಶಿಕುಮಾರ್ (23), ಲೋಕೇಶ್ (25) ಎಂದು ಗುರುತಿಸಲಾಗಿತ್ತು. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ರೈಲ್ವೆ ಟ್ರ್ಯಾಕ್‌ ಇರುವ ಕಾರಣ ರಾತ್ರಿಯಲ್ಲಿ ಯುವಕರು ಮೊಬೈಲ್ ಹಾಗೂ ಹೆಡ್‌ಫೋನ್‌ ಹಾಕಿಕೊಂಡು ಟ್ರ್ಯಾಕ್ ಮೇಲೆ ಕುಳಿತುಕೊಳ್ಳುತ್ತಾರೆ. ಪೊಲೀಸರು ಬಂದಾಗ ಇಲ್ಲಿಂದ ತೆರಳುತ್ತಾರೆ, ನಂತರ ಮತ್ತೆ ವಾಪಸ್ ಬಂದು ಇಲ್ಲೇ ಕೂರುತ್ತಾರೆ. ಹೀಗಾಗಿ ಆಕಸ್ಮಿಕವಾಗಿ ರೈಲು ಅವರ ಮೇಲೆ ಹರಿದಿರಬಹುದು ಎಂದು ತಿಳಿಸಿದ್ದರು.

Exit mobile version