ಲಕ್ನೋ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವ ಕಳೆದುಕೊಳ್ಳವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಕಷ್ಟು ಎಚ್ಚರಿಕೆ ನೀಡಿದರೂ ಈ ರೀತಿಯ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಯುವ ಜನತೆ, ಹದಿ ಹರೆಯದವರು, ಮಕ್ಕಳೇ ಹೆಚ್ಚಾಗಿ ಸೆಲ್ಫಿ ಕ್ರೇಜ್‌ಗೆ ಬಲಿಯಾಗುತ್ತಿದ್ದಾರೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ ಅಪಾಯಕಾರಿಯಾಗಿ ಸೆಲ್ಫಿ ಕ್ಲಿಕಿಸಲು ಹೋಗಿ ಇಬ್ಬರು ಹದಿಹರೆಯದವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ (Selfie Tragedy).
ರಾಯ್‌ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ಸ್ನೇಹಿತರ ಗುಂಪು ಪ್ರಯಾಗ್‌ಪುರ್‌ನ ಗಂಗಾ ಘಾಟ್‌ನಲ್ಲಿ ಗಂಗಾ ನದಿಯಲ್ಲಿ ದೋಣಿ ಮೇಲೆ ಪ್ರಯಾಣಿಸುತ್ತಿದ್ದಾಗ ಅಪಾಯಕಾರಿಯಾಗಿ ಸೆಲ್ಫಿ ತೆಗೆಯಲು ಮುಂದಾಗಿದೆ. ಈ ವೇಳೆ ದೋಣಿ ಮಗುಚಿ ದುರಂತ ಸಂಭವಿಸಿದೆ. ತೌಹೀದ್ (17), ಫಹಾದ್ (19) ಮತ್ತು ಶಾನ್ (18) ಸಂಚರಿಸುತ್ತಿದ್ದ ದೋಣಿ ಮುಳುಗಿದ್ದು, ಈ ಪೈಕಿ ತೌಹೀದ್ ಮತ್ತು ಶಾನ್ ಮೃತಪಟ್ಟಿದ್ದಾರೆ. ಫಹಾದ್ ಹೇಗೋ ಈಜಿ ದಡ ಸೇರಿದ್ದಾನೆ.
“ಸೆಲ್ಫಿ ಕ್ಲಿಕ್ಕಿಸಲು ಎಲ್ಲರೂ ಒಂದು ಕಡೆ ಸರಿದಿದ್ದರಿಂದ ದೋಣಿ ಸಮತೋಲನವನ್ನು ಕಳೆದುಕೊಂಡು ಮಗುಚಿತು. ಈ ವೇಳೆ ಮೂವರು ನದಿಗೆ ಬಿದ್ದು ಬಿಟ್ಟರು. ತೌಹೀದ್ ಮತ್ತು ಶಾನ್ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರೆ, ಫಹಾದ್ ಈಜಿ ದಡ ಸೇರಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆಯಾಗಿದ್ದು, ಪೋಸ್ಟ್ ಮಾರ್ಟ್‌ಮ್‌ಗಾಗಿ ಕಳುಹಿಸಿ ಕೊಡಲಾಗಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Drowned in water : ಅಪ್ಪಳಿಸಿ ಬಂದ ರಕ್ಕಸ ಅಲೆಗೆ ಕೊಚ್ಚಿ ಹೋದ ಮಹಿಳೆ ಸಾವು; ಮೂವರ ರಕ್ಷಣೆ
ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ
ಶಿವಮೊಗ್ಗ: ಸೆಲ್ಫಿ ಕ್ರೇಜ್‌ಗೆ ಯುವಕ ಬಲಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದ (Abbi Falls) ಬಳಿ ಭಾನುವಾರ ನಡೆದಿದೆ. ಫಾಲ್ಸ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಬಿದ್ದು ಪ್ರವಾಸಿಗ ಮೃತ ಪಟ್ಟಿದ್ದಾನೆ. ಬಳ್ಳಾರಿ ಮೂಲದ ವಿನೋದ್ (26) ಮೃತ ಯುವಕ. ಬೆಂಗಳೂರಿನಿಂದ ಪ್ರವಾಸಕ್ಕೆಂದು 12 ಯುವಕರ ತಂಡ ಅಬ್ಬಿ ಫಾಲ್ಸ್‌ಗೆ ಬಂದಿತ್ತು. ಈ ವೇಳೆ ಜಲಪಾತ ಬಳಿ ನಿಂತು ಯುವಕ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ ಹೈದರಾಬಾದ್‌ನ ಯುವಕನೊಬ್ಬ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ. ಹೈದರಾಬಾದ್ ಮೂಲದ ಶ್ರವಣ್ (25) ಮೃತ ದುರ್ದೈವಿ. ಶ್ರವಣ್ ತನ್ನ ಸ್ನೇಹಿತನೊಂದಿಗೆ ಹೈದರಾಬಾದ್‌ನಿಂದ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.