Site icon Vistara News

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

Share Market

Sensex Rises Over 1,100 Points, Nifty Near 23,000: What Drove Today's Market Rally?

ಮುಂಬೈ: “ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು (Share Market) ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಇದೇ ಮಾತು ಹೇಳಿದ್ದಾರೆ. ಇದರ ಮಧ್ಯೆಯೇ, ಗುರುವಾರ (ಮೇ 23) ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಯ ಸಂಕೇತವಾಗಿಯೇ ಷೇರು ಮಾರುಕಟ್ಟೆಯು ದಾಖಲೆ ಬರೆದಿದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

“ನಿಫ್ಟಿಯು ದಾಖಲೆಯ ಏರಿಕೆ ಕಾಣುವ ಮೂಲಕ ಚುನಾವಣೆ ನಂತರದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ ಎಂಬ ಸಂದೇಶ ರವಾನಿಸಿದೆ. ಅತಿ ಹೆಚ್ಚಿನ ಹಣ ಹೂಡಿಕೆ ಮಾಡುವವರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಜಿಯೋಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ರಣತಂತ್ರಗಾರ ವಿ.ಕೆ.ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆ ಫಲಿತಾಂಶದ ದಿನ ಷೇರು ಪೇಟೆಯಲ್ಲಿ ಲವಲವಿಕೆ ಇದ್ದೇ ಇರುತ್ತದೆ. ಆದರೆ, ಜೂನ್‌ 4ರಂದು ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಿರುವುದು ಹೂಡಿಕೆದಾರರ ಖುಷಿ ಹೆಚ್ಚಿಸಿದೆ.

ಕೇಂದ್ರಕ್ಕೆ ಆರ್‌ಬಿಐ ಲಾಭಾಂಶದ ಕೊಡುಗೆ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.10 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಷೇರು ಮಾರುಕಟ್ಟೆ ಬಗ್ಗೆ ಮೋದಿ ಹೇಳಿದ್ದೇನು?

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Exit mobile version